Advertisement

ಬಿಜೆಪಿ ಬದಿಗಿಟ್ಟು ಜಾತಿಗಣತಿಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ತೀರ್ಮಾನ?

08:10 PM May 23, 2022 | Team Udayavani |

ಪಾಟ್ನಾ: ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತೀರ್ಮಾನಿಸಿದ್ದಾರೆ.

Advertisement

ಈ ಅಂಶ ಮಿತ್ರಪಕ್ಷ ಬಿಜೆಪಿಗೆ ಹಿತ ತಂದಿಲ್ಲ. ಆದರೆ, ಪ್ರತಿಪಕ್ಷ ಆರ್‌ಜೆಡಿ ಇದನ್ನು ಸ್ವಾಗತಿಸಿದೆ. ಈ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಮೇ 27ರಂದು ಸರ್ವಪಕ್ಷಗಳ ಸಭೆ ಆಯೋಜಿಸಲೂ ಸಿಎಂ ತೀರ್ಮಾನಿಸಿದ್ದಾರೆ. ಇದರಿಂದ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಸರ್ಕಾರದಲ್ಲಿನ ಮುಸುಕಿನ ಗುದ್ದಾಟದ ಸದ್ದು ಮತ್ತಷ್ಟು ಜೋರಾಗಿದೆ.

ಸಭೆಯ ಬಗ್ಗೆ ಸೋಮವಾರ ಪಾಟ್ನಾದಲ್ಲಿ ಮಾತನಾಡಿದ ಸಿಎಂ ನಿತೀಶ್‌ ಕುಮಾರ್‌, “ಪ್ರತಿ ರಾಜಕೀಯ ಪಕ್ಷದ ಮುಖಂಡರ ಜತೆಗೆ ಈಗಾಗಲೇ ವೈಯಕ್ತಿಕವಾಗಿ ಮಾತುಕತೆ ನಡೆಸಲಾಗುತ್ತಿದೆ. ಕೆಲವು ಪಕ್ಷಗಳು ತಮ್ಮ ಅಭಿಪ್ರಾಯ ತಿಳಿಸಿಲ್ಲ. ಅದಕ್ಕಾಗಿ ಕಾಯಲಾಗುತ್ತಿದೆ. ಮೇ 27ರಂದು ಜಾತಿ ಆಧಾರಿತ ಜನಗಣತಿ ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಅದರಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಆಧರಿಸಿ, ರಾಜ್ಯ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಚರ್ಚಿಸಿ ಪ್ರತಿಕ್ರಿಯೆ:
ಬಿಜೆಪಿ ಮುಖಂಡ ಮತ್ತು ಡಿಸಿಎಂ ತಾರ್‌ಕಿಶೋರ್‌ ಪ್ರಸಾದ್‌ ಪ್ರತಿಕ್ರಿಯೆ ನೀಡಿ “ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಹೇಳಿದ್ದಾರೆ. ಕಳೆದ ವರ್ಷವೇ ಕೇಂದ್ರ ಸರ್ಕಾರಕ್ಕೆ ಬಿಹಾರ ಸರ್ಕಾರದ ವತಿಯಿಂದ ಸರ್ವ ಪಕ್ಷ ನಿಯೋಗ ತೆರಳಿ, ಜಾತಿ ಆಧಾರಿತ ಜನಗಣತಿ ನಡೆಸುವ ಬಗ್ಗೆ ಪ್ರಧಾನಿಯವರಿಗೆ ಮನವಿ ಸಲ್ಲಿಸಿತ್ತು.

ಕೇಂದ್ರ ಸಚಿವ ಸಿಂಗ್‌ ರಾಜೀನಾಮೆ?
ಸದ್ಯ ಕೇಂದ್ರದಲ್ಲಿ ಉಕ್ಕು ಖಾತೆ ಸಚಿವರಾಗಿರುವ ಜೆಡಿಯು ಮುಖಂಡ ರಾಮಚಂದ್ರ ಪ್ರಸಾದ್‌ ಸಿಂಗ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನೀಡದೇ ಇರಲು ಬಿಹಾರ ಸಿಎಂ ನಿತೀಶ್‌ ತೀರ್ಮಾನಿಸಿದ್ದಾರೆ.

Advertisement

ಬಿಜೆಪಿ ಮುಖಂಡರ ಜತೆಗೆ ಅವರು ಹೆಚ್ಚಿನ ಬಾಂಧವ್ಯ ಹೊಂದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಕೆಲದಿನಗಳ ಹಿಂದೆ ರಾಜ್ಯಸಭೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಶಾಸಕರಿಗೆ ಸೂಚಿಸಲಾಗಿತ್ತು. ಇದೇ ಮೊದಲ ಬಾರಿಗೆ ಇಂಥ ತೀರ್ಮಾನವನ್ನು ಜೆಡಿಯು ಕೈಗೊಂಡಿರುವುದೂ ಬಿಜೆಪಿ ಜತೆಗಿನ ಸಖ್ಯ ಶೀಘ್ರದಲ್ಲಿಯೇ ಮುರಿದು ಬೀಳುತ್ತದೆಯೋ ಎಂಬ ಬಗೆಗಿನ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next