ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾಘಟಬಂಧನ್ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿರುವುದಾಗಿ ಮೂಲಗಳು ಶುಕ್ರವಾರ (ಅಕ್ಟೋಬರ್ 02, 2020) ತಿಳಿಸಿದ್ದು, ಕಾಂಗ್ರೆಸ್ ಪಕ್ಷ 70 ಕ್ಷೇತ್ರಗಲಲ್ಲಿ ಹಾಗೂ ಎಡ ಪಕ್ಷಗಳು 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ಪ್ರಕಾರ, ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷ ಕಾಂಗ್ರೆಸ್ ಗೆ 70 ಸ್ಥಾನ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷ ಕೇಳಿರುವ ಕ್ಷೇತ್ರವನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ.
ಎನ್ ಡಿಎ ಮುಖಂಡರು ಕೂಡಾ ಗುರುವಾರ ಪಾಟ್ನಾದಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದರು. ಅಕ್ಟೋಬರ್ 4ರ ಮೊದಲು ದೆಹಲಿಯಲ್ಲಿ ಸೀಟು ಹಂಚಿಕೆ ಕುರಿತು ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಬಿಹಾರ ವಿಧಾನಸಭೆಗೆ ನಡೆಯಲಿರುವ ಮೊದಲ ಹಂತದ ಚುನಾವಣೆ (71ಸ್ಥಾನ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಚುನಾವಣೆ ಸಿದ್ಧತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಬಿಹಾರದಲ್ಲಿ ಮೂರು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ತಿಳಿಸಿದ್ದರು. ಅಕ್ಟೋಬರ್ 28ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಘೋಷಣೆಯಾಗಲಿದೆ.