ಪಾಟ್ನ: ದಿಲ್ಲಿಯ ನಿರ್ಭಯಾ ಪ್ರಕರಣ, ಉನ್ನಾವೋ ಹಾಗೂ ಹೈದರಾಬಾದ್ ನ ದಿಶಾ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮೂವರು ಬಾಲಕರು ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವ ಆಘಾತಕಾರಿ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನೆರೆಮನೆಗೆ ಟಿವಿ ನೋಡಲು ತೆರಳುತ್ತಿದ್ದ 8 ವರ್ಷದ ಬಾಲಕಿಯನ್ನು 12 ಮತ್ತು 15 ವರ್ಷದ ನಡುವಿನ ಮೂವರು ಬಾಲಕರು ಅಪಹರಿಸಿದ್ದರು. ಈ ಘಟನೆ ನಡೆದದ್ದು ಭಾನುವಾರ. ಮನೆಯವರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲವಾಗಿತ್ತು. ರಾತ್ರಿಯೂ ಬಾಲಕಿ ಮನೆಗೆ ಬಂದಿರಲಿಲ್ಲವಾಗಿತ್ತು.
ಸೋಮವಾರ ಬೆಳಗ್ಗೆ ಅಡಿಕೆ ಅಂಗಡಿ ಸಮೀಪ ಬಾಲಕಿಯ ಶವ ಪತ್ತೆಯಾಗಿತ್ತು. ಸ್ಥಳೀಯರ ಒತ್ತಡದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸದೇ ಶವ ಸಂಸ್ಕಾರ ನಡೆಸಲು ಧಾಮಾಧಾ ಪೊಲೀಸ್ ಠಾಣಾಧಿಕಾರಿ ನಿರ್ಧರಿಸಿದ್ದರು.
ಮತ್ತೊಂದೆಡೆ ಆರೋಪಿಗಳಲ್ಲಿ ಒಬ್ಬ ತಾನು ಹಾಗೂ ಇನ್ನಿಬ್ಬರು ಸೇರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ವಿಷಯವನ್ನು ಗೆಳೆಯನಿಗೆ ಹೇಳಿಬಿಟ್ಟಿದ್ದ. ಇದು ಎಲ್ಲೆಡೆ ಹಬ್ಬಿ ವಿಷಯ ಬಹಿರಂಗವಾಗಿತ್ತು ಎಂದು ವರದಿ ತಿಳಿಸಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಶಂಕಿತನನ್ನು ಹಿಡಿದು ಥಳಿಸಿದ್ದರು. ನಂತರ ಮತ್ತೊಬ್ಬ ಆರೋಪಿ ಹೆಸರನ್ನು ಬಹಿರಂಗಗೊಳಿಸಿದ್ದ. ಕೊನೆಗೂ ಇಬ್ಬರನ್ನು ಪೊಲೀಸರ ವಶಕ್ಕೊಪ್ಪಿಸಿದ್ದರು. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ನಿಜ ವಿಷಯ ಬಹಿರಂಗವಾದ ಮೇಲೆ ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ವರದಿ ವಿವರಿಸಿದೆ.
ಮೂವರು ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು. ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಾಪರಾಧ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದೇವೆ. ನಂತರ ಇಬ್ಬರನ್ನೂ ನಿರ್ಬಂಧ(ರಿಮಾಂಡ್) ಗೃಹಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಧಾಮಾಧಾ ಪೊಲೀಸ್ ಠಾಣಾಧಿಕಾರಿ ರಾಜ್ ಕಿಶೋರ್ ಶರ್ಮಾ ತಿಳಿಸಿದ್ದಾರೆ.