ಮುಂಬಯಿ: ದೇಶದಲ್ಲಿ ನೋಟು ಅಪಮೌಲ್ಯ ಮಾಡಿರುವುದು ಪ್ರಧಾನಿ ಮೋದಿ ಅವರ ಬಹುದೊಡ್ಡ ಹಗರಣವಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ.
ನಗರದ ಕಾಲಾಚೌಕಿಯ ಹುತಾತ್ಮ ಭಗತ್ ಸಿಂಗ್ ಮೈದಾನದಲ್ಲಿ ನಡೆದ ವಿಶೇಷ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಲ್ಲಿ ನಡೆದ ಬಹುದೊಡ್ಡ ಹಗರಣವೆಂದರೆ ಅದು ನೋಟು ಅಪಮೌಲ್ಯೀಕರಣ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಂದ ದೇಶಕ್ಕೆ ಬಹುದೊಡ್ಡ ಅಘಾತ ಕಾದಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮೋದಿ ಸರಕಾರ ಹೇಳುವುದು ಒಂದಾದರೆ, ಮಾಡುವುದು ಇನ್ನೊಂದು. ಬರೀ ಸುಳ್ಳು ಹೇಳಿ ದೇಶದ ಜನತೆಯನ್ನು ದಾರಿ ತಪ್ಪಿಸುವ ಕಾಯಕದಲ್ಲಿ ಕಳೆದ 5 ವರ್ಷಗಳನ್ನು ಮೋದಿ ಸರಕಾರ ಕಳೆದಿದೆ ಎಂದು ಹೇಳಿದರು.
ಬಿಜೆಪಿಯು ಗುಜರಾತ್‌ನಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಈಗಾಗಲೇ ಸೋತು ಹೋಗಿದ್ದು, ಸುಳ್ಳು ಭರವಸೆಗಳನ್ನು ನೀಡಿ ಲೋಕಸಭಾ ಚುನಾವಣೆಗಿಳಿದಿದೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಭವಿಷ್ಯ ಅಡಗಿದ್ದು, ದೇಶದ ಜನತೆ ಪ್ರಧಾನಿ ಮೋದಿಯವರ ಸುಳ್ಳು ಭರವಸೆಗಳಿಗೆ ಮಾರುಹೋಗದೆ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಮೋದಿ ಅವರು ಪ್ರಾರಂಭದಲ್ಲಿ ಉದ್ಯೋಗದ ಭರವಸೆಯನ್ನು ನೀಡಿದ್ದರು. ಎಷ್ಟು ಮಂದಿಗೆ ಉದ್ಯೋಗ ಸೃಷ್ಟಿಸಿಕೊಟ್ಟಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕಾದ ಅನಿವಾರ್ಯ ಇದೆ ಎಂದು ಆಗ್ರಹಿಸಿದ್ದಾರೆ.
ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಸುಳ್ಳಿನ ಯೋಜನೆಯಾಗಿದೆ. ಜೆಟ್ ಏರ್‌ವೆàಸ್ ಸ್ಥಗಿತಗೊಂಡ ಪರಿಣಾಮ ಸಾವಿರಾರು ಮಂದಿ ಉದ್ಯೋಗವನ್ನು ಕಳೆದುಕೊಂಡು ಅವರ ಕುಟುಂಬ ಬೀದಿಗೆ ಬಂದಿದೆ. ಈ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೈಟ್ಲಿ ಅವರು ಮೌನಕ್ಕೆ ಶರಣಾಗಿದ್ದಾರೆ. ದೇಶದ ಗಡಿ ರಕ್ಷಣೆಯಲ್ಲಿ ತೊಡಗಿರುವ ವೀರ ಯೋಧರ ಹೆಸರಿನಲ್ಲಿ ಮೋದಿ ಮತ ಯಾಚಿಸುತ್ತಿದ್ದು, ದೇಶದ ದುರಂತವಾಗಿದೆ ಎಂದು ಹೇಳಿದ್ದಾರೆ.
600 ಕೋ.ರೂ. ರಫೇಲ್ ಒಪ್ಪಂದವು 1,600 ಕೋ. ರೂ.ಗಳಿಗೆ ಹೇಗೆ ನೆಗೆದಿದೆ. ಉದ್ಯೋಗಪತಿ ಅನಿಲ್ ಅಂಬಾನಿಗೆ ಇದನ್ನು ನೀಡುವ ಔಚಿತ್ಯವಾದರೂ ಏನಿತ್ತು ಎಂಬುದಕ್ಕೆ ಪ್ರಧಾನಿ ಮೋದಿ ಅವರು ಉತ್ತರಿಸಬೇಕು. ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗಬೇಕು ಎಂದು ಉದ್ಗರಿಸಿದ್ದರ ಮರ್ಮವಾದರೂ ಏನು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನನ್ನ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪಾತ್ರ ಏನೂ ಇಲ್ಲ. ಆದರೆ ದೇಶದ ಒಳಿತಿಗಾಗಿ ಬಿಜೆಪಿಯನ್ನು ಜನತೆ ಕಡೆಗಣಿಸಬೇಕು ಎಂಬುದೇ ನನ್ನ ಧ್ಯೇಯವಾಗಿದೆ ಎಂದರು.