Advertisement
ಸುಮಾರು 36 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಹು ದೊಡ್ಡ ಅನಾಹುತ ಸೃಷ್ಟಿಸಿದ್ದ ಗಂಗಾರಾಮ್ ಬಹುಮಹಡಿ ಕಟ್ಟಡ ಕುಸಿತ ಘಟನೆ ನಂತರ ಬಹುದೊಡ್ಡ ಮಟ್ಟಿಗೆ ಸುದ್ದಿಯಾಗಿರುವುದು ಧಾರವಾಡ ಹೊಸ ಬಸ್ ನಿಲ್ದಾಣ ಬಳಿಯ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಐದು ಮಹಡಿ ವಾಣಿಜ್ಯ ಸಂಕೀರ್ಣವಾಗಿದೆ. ಧಾರವಾಡದಲ್ಲಿನ ಬಹುಮಹಡಿ ಕಟ್ಟಡ ಕುಸಿತದಿಂದ ಬುಧವಾರ ರಾತ್ರಿವರೆಗಿನ ವರದಿಯಂತೆ ಸುಮಾರು 6 ಜನ ಮೃತಪಟ್ಟಿದ್ದು, 58 ಜನರನ್ನು ಪಾರು ಮಾಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಹಳೇ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ಕುಸಿದು ಅನಾಹುತಗಳು ಸಂಭವಿಸಿವೆಯಾದರೂ, ದೊಡ್ಡ ಪ್ರಮಾಣದ ಕಟ್ಟಡವೊಂದು ಕುಸಿದು ಹೆಚ್ಚಿನ ಅನಾಹುತ ಸೃಷ್ಟಿಸಿರುವುದು ಇದೇ ಮೊದಲೆನ್ನಬಹುದು.
Related Articles
Advertisement
ಕೆಲವರ ಅನಿಸಿಕೆ ಪ್ರಕಾರ ಮಂಗಳವಾರವಾದ್ದರಿಂದ ಸಂತೆ ಎಂಬ ಕಾರಣಕ್ಕೆ ಹಲವು ಕಾರ್ಮಿಕರು ಕೆಲಸಕ್ಕೆ ಬಂದಿರಲಿಲ್ಲ. ಬೆಳಿಗ್ಗೆ ಅಥವಾ ಸಂಜೆಯಾಗಿದ್ದರೆ ಈ ಕಟ್ಟಡದಲ್ಲಿ ವಿವಿಧ ವ್ಯಾಪಾರಿ ಮಳಿಗೆ, ಹೊಟೇಲ್ ಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಅಧಿಕವಾಗಿರುತ್ತಿತ್ತು. ಮಧ್ಯಾಹ್ನ 3:00ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದರಿಂದ ಆಗಬಹುದಾಗಿದ್ದ ಇನ್ನಷ್ಟು ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂಬುದಾಗಿದೆ.
ಗಂಗಾರಾಮ್ ಕಟ್ಟಡ ಕಹಿ ನೆನಪುಬೆಂಗಳೂರಿನಲ್ಲಿ ಮೆಜೆಸ್ಟಿಕ್ ಹತ್ತಿರದ ಸುಭೇದಾರ ಛತ್ರಂ ರಸ್ತೆಯಲ್ಲಿ ಗಂಗಾರಾಮ್ ಬಹುಮಹಡಿ ಕಟ್ಟಡ ಕುಸಿತದ ಕಹಿ ನೆನಪು, ಧಾರವಾಡದಲ್ಲಿನ ಬಹುಮಹಡಿ ಕಟ್ಟಡ ಕುಸಿತ ಘಟನೆಯಿಂದ ಮತ್ತೆ ಸ್ಪೃತಿಪಟಲದಲ್ಲಿ ಹಲವರಿಗೆ ಸುಳಿದಾಡುವಂತೆ ಮಾಡಿದೆ. 1983ರ ಸೆಪ್ಟೆಂಬರ್‌ನಲ್ಲಿ ಗಂಗಾರಾಮ್ ಬಹುಮಹಡಿ ಕಟ್ಟಡ ಕುಸಿತವಾಗಿ ಸುಮಾರು 123 ಜನರು ಮೃತಪಟ್ಟು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದುರಂತ ಪ್ರಮಾಣ ಎಷ್ಟಿತ್ತೆಂದರೆ ಅಗ್ನಿಶಾಮಕ ದಳ, ಪೊಲೀಸರು, ಕೆಜಿಎಫ್ ಗಣಿಯ 30ಕ್ಕೂ ಹೆಚ್ಚು ನುರಿತ ಕಾರ್ಮಿಕರು, ಸ್ವಯಂ ಸೇವಕರು ಸುಮಾರು 34 ದಿನಗಳವರೆಗೆ ಕಾರ್ಯಾಚರಣೆ ನಡೆಸಬೇಕಾಗಿತ್ತು. ಉತ್ತರ ಕರ್ನಾಟಕದಲ್ಲಿ ಕಟ್ಟಡ ಕುಸಿತ, ಸಿಮೆಂಟ್ ಫ್ಯಾಕ್ಟರಿಯಲ್ಲಿ ಕ್ರೇನ್ ಕುಸಿತ, ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ನೀರಿನ ಟ್ಯಾಂಕ್ ಕುಸಿತದಿಂದ ಅನೇಕರು ಮೃತಪಟ್ಟಿದ್ದಾರೆಯಾದರೂ, ಧಾರವಾಡದಲ್ಲಿನ ಕಟ್ಟಡ ಕುಸಿತ ಇವೆಲ್ಲವನ್ನು ಮೀರಿಸುವಂತೆ ಮಾಡಿದೆ. ಅಮರೇಗೌಡ ಗೋನವಾರ