ಬೆಂಗಳೂರು: ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಏರೋ ಇಂಡಿಯಾ ಶೋ’ದ 14ನೇ ಆವೃತ್ತಿ ಸೋಮವಾರ ಉದ್ಘಾಟನೆಗೊಳ್ಳಲಿದೆ.
ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 9.30ಕ್ಕೆ ಚಾಲನೆ ನೀಡಲಿದ್ದಾರೆ. ಶುಕ್ರವಾರದ ವರೆಗೆ, ಒಟ್ಟು ಐದು ದಿನಗಳ ಕಾಲ ಲೋಹದ ಹಕ್ಕಿಗಳ ಕಸರತ್ತು ನಡೆಯಲಿದೆ.
ಆತ್ಮನಿರ್ಭರ ವ್ಯಾಖ್ಯೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋದಲ್ಲಿ ದೇಶದ ವೈಮಾನಿಕ ಕ್ಷೇತ್ರದಲ್ಲಿ ಅವಕಾಶಗಳ ರನ್‌ವೇ ತೆರೆದುಕೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರಲಿದ್ದಾರೆ.
ಏನೇನು ನಿರೀಕ್ಷೆ?
-ಎಫ್ 16 ವೈಪರ್ , ಎಫ್/ಎ 18 ಸೂಪರ್ ಹಾರ್ನೆಟ್ ಜತೆಗೆ ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನವಾದ ಅಮೆರಿಕದ ಎಫ್-35 ಭಾಗಿ ಸಾಧ್ಯತೆ
-ಎಚ್‌ಎಎಲ್‌ನ ನೆಕ್ಸ್ಟ್ ಜನರೇಷನ್ ಸೂಪರ್ ಸಾನಿಕ್ ಟ್ರೈನರ್ ಮೊದಲ ಬಾರಿ ಪ್ರದರ್ಶನ ಸಾಧ್ಯತೆ
-ಎಲ್‌ಸಿಎ ಎಂಕೆ 2, ಹಿಂದುಸ್ಥಾನ್ ಟಬೋì ಶಾಫ್ಟ್ ಎಂಜಿನ್-1200, ಆರ್‌ಯುಎವಿ, ಹಿಂದುಸ್ತಾನ್ -228 ಮಾದರಿಗಳ ವಿಮಾನ ಪ್ರದರ್ಶನ
-ತೇಜಸ್, ಸಾರಂಗ್, ಸೂರ್ಯಕಿರಣ್, ರಫೇಲ್, ಸುಖೋಯ್ ಯುದ್ಧವಿಮಾನಗಳ ಸಾಹಸ
ಉದ್ಯಾನ ನಗರಿಯಲ್ಲಿ ನಡೆಯುವ “ಏರೋ ಇಂಡಿಯಾ ಶೋ’ ಒಂದು ಆವೃತ್ತಿಯಿಂದ ಮತ್ತೂಂದು ಆವೃತ್ತಿಗೆ ಜನಪ್ರಿಯತೆ ಗಳಿಸುತ್ತ ಬಂದಿದೆ. ಈ ಜನಪ್ರಿಯತೆ ವೈಮಾನಿಕ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಲಿದೆ. ಈ ಬಾರಿಯ ಪ್ರದರ್ಶನವು ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟುವ ಮೂಲಕ ಇದುವರೆಗಿನ ಅತೀ ದೊಡ್ಡ ಶೋ ಆಗಲಿದೆ. ಉದಯೋನ್ಮುಖ ತಂತ್ರಜ್ಞಾನ, ಸಾಮರ್ಥ್ಯಗಳ ಪ್ರದರ್ಶನಕ್ಕೂ ವೇದಿಕೆಯಾಗಲಿದ್ದು, ಯುವಕರಿಗೆ ಇಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳಲಿವೆ.
– ರಾಜನಾಥ್ ಸಿಂಗ್, ರಕ್ಷಣ ಸಚಿವ