ಮುಂಬಯಿ: ಬಿಗ್ ಬಾಸ್ ಮರಾಠಿ-5 (Bigg Boss Marathi 5) ಮುಕ್ತಾಯವಾಗಿದೆ. ಟಾಪ್ 3 ಫಿನಾಲೆ ಸ್ಪರ್ಧಿಗಳ ಪೈಕಿ ಒಬ್ಬರು ಟ್ರೋಫಿ ಹಾಗೂ ನಗದನ್ನು ತನ್ನದಾಗಿಸಿಕೊಂಡಿದ್ದಾರೆ.
ಭಾನುವಾರ (ಅ.6ರಂದು) ಮರಾಠಿ ಬಿಗ್ ಬಾಸ್ ಸೀಸನ್ -5 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ರಿತೇಶ್ ದೇಶಮುಖ್ (Riteish Deshmukh) ನಡೆಸಿಕೊಡುವ ಮರಾಠಿ ಬಿಗ್ ಬಾಸ್ ಫಿನಾಲೆಯಲ್ಲಿ ಸೂರಜ್ ಚವಾಣ್, ಅಭಿಜೀತ್ ಸಾವಂತ್ ಮತ್ತು ನಿಕ್ಕಿ ತಾಂಬೋಲಿ ಟಾಪ್ 3 ಫೈನಾಲಿಸ್ಟ್ ಆಗಿದ್ದರು.
ಇದರಲ್ಲಿ ಪ್ರೇಕ್ಷಕರು ಅತೀ ಹೆಚ್ಚು ಮತವನ್ನು ಸೂರಜ್ ಚವಾಣ್ (Suraj Chavan) ಅವರಿಗೆ ಹಾಕಿದ್ದು ಆ ಮೂಲಕ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಅಭಿಜಿತ್ ಸಾವಂತ್ (Abhijeet Sawant) ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಸೂರಜ್ ಗೆದ್ದ ಮೊತ್ತವೆಷ್ಟು..? : ಬಿಗ್ ಬಾಸ್ ಮರಾಠಿ 5ರ ಟ್ರೋಫಿಯನ್ನು ಎತ್ತಿದ್ದ ಸೂರಜ್ 14.6 ಲಕ್ಷ ರೂ. ನಗದು ಬಹುಮಾನ ಹಾಗೂ ಇದರೊಂದಿಗೆ ಇವಿ ಬೈಕ್ ಕೂಡ ಬಹುಮಾನವಾಗಿ ಗೆದ್ದುಕೊಂಡಿದ್ದಾರೆ.
ಯಾರು ಈ ಸೂರಜ್.. ಸೋಶಿಯಲ್ ಮೀಡಿಯಾ ಪ್ರಭಾವಿ ಆಗಿರುವ ಸೂರಜ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮೋಧವೆ ಗ್ರಾಮದವರಾದ ಸೂರಜ್ ತನ್ನ ಮನರಂಜನೆಯ ರೀಲ್ಸ್ ವಿಡಿಯೋಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರ ರೀಲ್ಸ್ ಗಳ ಜನಪ್ರಿಯತೆ ಅವರನ್ನು ಬಿಗ್ ಬಾಸ್ ವೇದಿಕೆ ಹತ್ತಿಸಿ ಟ್ರೋಫಿ ಗೆಲ್ಲುವಂತೆ ಮಾಡಿದೆ.
ಅಮ್ಮ- ಅಮ್ಮನ ಸಾವು.. ಅನಾಥನಾಗಿ ಬೆಳೆದ ಹುಡುಗ..: ಸೂರಜ್ ವಿಡಿಯೋಗಳ ಮೂಲಕ ಸಾವಿರಾರು ಮಂದಿಯನ್ನು ರಂಜಿಸುತ್ತಾರೆ. ಆದರೆ ಅವರ ಆರಂಭಿಕ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ, ಕಲ್ಲು ಹಾದಿಯಲ್ಲಿ ಸಾಗಿದಂತಿದೆ.
ಬಡ ಕುಟುಂಬದಲ್ಲಿ ಬೆಳದ ಸೂರಜ್ ಕ್ಯಾನ್ಸರ್ ಕಾಯಿಲೆಯಿಂದ ತನ್ನ ಅಪ್ಪನನ್ನು ಕಳೆದುಕೊಳ್ಳುತ್ತಾರೆ. ಆದರೆ ವಿಧಿಯ ಆಟ ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತದೆ. ತನ್ನ ತಂದೆ ತೀರಿ ಹೋದ ಅದೇ ದಿನ ತನ್ನ ತಾಯಿ, ಅಜ್ಜಿಯನ್ನೂ ಸೂರಜ್ ಕಳೆದುಕೊಂಡು ಅನಾಥರಾಗುತ್ತಾರೆ.
ಸಣ್ಣ ವಯಸ್ಸಿನಲ್ಲೇ ಸೂರಜ್ ತನ್ನ ಐವರು ಸಹೋದರಿಯರನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಆರಂಭದಲ್ಲಿ ತೀರ ಕಷ್ಟಪಟ್ಟು ಸಹೋದರಿಯರನ್ನು ನೋಡಿಕೊಳ್ಳುತ್ತಾ, ದುಡಿಮೆಯ ಹಾದಿಯನ್ನು ಹಿಡಿಯುತ್ತಾರೆ.
ತನ್ನ ಮನೆ ಪಕ್ಕದ ಜಮೀನಿನಲ್ಲಿ ರೀಲ್ಸ್ ಮಾಡುತ್ತಾ, ಡೈಲಾಗ್ಸ್ ಗಳನ್ನು ಹೊಡೆಯುತ್ತಾ, ಡ್ಯಾನ್ಸ್ ಮಾಡುತ್ತಾ ಹೆಚ್ಚಿನ ಫಾಲೋವರ್ಸ್ ಗಳನ್ನು ಗಳಿಸಿರುವ ಸೂರಜ್ ಇಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿ ಆಗಿ ಹೊರಹೊಮ್ಮಿದ್ದಾರೆ.
ತನ್ನ ವಿಭಿನ್ನ ಹಾಸ್ಯದ ಶೈಲಿಯ ವಿಡಿಯೋಗಳಿಂದ ಇಂಟರ್ ನೆಟ್ ನಲ್ಲಿ ಸದ್ದು ಮಾಡಿದ ಸೂರಜ್ ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ʼರಾಜಾ ರಾಣಿʼ , ʼಮುಸಂಡಿʼ ಚಿತ್ರಗಳಲ್ಲಿ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 2.1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ವರದಿಗಳ ಪ್ರಕಾರ ಬಿಗ್‌ಬಾಸ್ ನಲ್ಲಿ ಸೂರಜ್ ವಾರಕ್ಕೆ 25 ಸಾವಿರ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.