Advertisement

BBK11: ಬಿಗ್‌ ಬಾಸ್‌ಗೆ ಸುದೀಪ್‌ ವಿದಾಯ; ಕಿಚ್ಚನ ನಿರ್ಧಾರಕ್ಕೆ ಅಸಲಿ ಕಾರಣ ಇದೇನಾ?

11:05 AM Oct 15, 2024 | Team Udayavani |

ಬೆಂಗಳೂರು: ಕಳೆದ 10 ವರ್ಷಗಳಿಂದ ಬಿಗ್‌ ಬಾಸ್‌ ಕನ್ನಡ (Bigg Boss Kannada) ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್‌ (Kiccha Sudeep) 11ನೇ ಸೀಸನ್‌ ಆರಂಭದಲ್ಲೇ ಇದು ತನ್ನ ಕೊನೆಯ ಸೀಸನ್‌ ಎಂದು ಹೇಳಿರುವುದು ಬಿಗ್‌ ಬಾಸ್‌ ವೀಕ್ಷಕರಿಗೆ ಶಾಕ್‌ ನೀಡಿದೆ.

Advertisement

ಕನ್ನಡದಲ್ಲಿ ಬಿಗ್‌ ಬಾಸ್‌ಗೆ ಹೆಚ್ಚು ವೀಕ್ಷಕರಿದ್ದಾರೆ ಎಂದರೆ ಅದಕ್ಕೆ ಸ್ಪರ್ಧಿಗಳಿಗಿಂತ ವಾರಕ್ಕೆ ಎರಡು ದಿನ ಬರುವ ಕಿಚ್ಚ ಸುದೀಪ್‌ ಅವರೇ ಪ್ರಮುಖ ಕಾರಣವೆಂದರೆ ತಪ್ಪಾಗದು. ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ಶುರುವಾದ ಎರಡು ವಾರದಲ್ಲೇ ಕಿಚ್ಚ ಸುದೀಪ್‌ ಇದು ನಿರೂಪಕನಾಗಿ ಬಿಗ್‌ ಬಾಸ್‌ನ ಕೊನೆಯ ಸೀಸನ್‌ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವೀಕ್ಷಕರು ಶಾಕ್‌ ಆಗಿದ್ದಾರೆ. ಕಿಚ್ಚನಿಲ್ಲದೆ ಬಿಗ್‌ ಬಾಸ್‌ ಕಲ್ಪಿಸಿಕೊಳ್ಳುವುದಕ್ಕೂ ಆಗಲ್ಲ ಎಂದು ಅನೇಕ ಮಾಜಿ ಸ್ಪರ್ಧಿಗಳು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸ್ವರ್ಗ – ನರಕದ ಕಾನ್ಸೆಪ್ಟ್‌ ನೊಂದಿಗೆ ಬಂದ ಈ ಬಾರಿಯ ಬಿಗ್ ಬಾಸ್‌ ಆರಂಭಕ್ಕೂ ಮುನ್ನ ನಿರೂಪಕರ ವಿಚಾರದಿಂದಲೇ ಸುದ್ದಿಯಾಗಿತ್ತು. ಆದರೆ ಕಿಚ್ಚ ಮತ್ತೆ ನಿರೂಪಣೆಗೆ ಬಂದ ಬಳಿಕ ಎರಡು ವಾರದಲ್ಲೇ ಬಿಗ್‌ ಬಾಸ್‌ ನಿರೂಪಣೆಗೆ ವಿದಾಯ ಹೇಳಿದ್ದೇಕೆ ಎನ್ನುವುದರ ಹಿಂದಿನ ಕಾರಣ ಈಗ ಬಹಿರಂಗವಾಗಿದೆ.

ಇದೇ ಕಾರಣಕ್ಕೆ ಬಿಗ್‌ ಬಾಸ್‌ಗೆ ಸುದೀಪ್‌ ವಿದಾಯ?: ಸುದೀಪ್‌ ಬಿಗ್‌ ಬಾಸ್‌ ನಿರೂಪಣೆಗೆ ಗುಡ್‌ ಬೈ ಹೇಳಿದ್ದಾರೆ. ಅದರ ಹಿಂದೆ ಕೆಲವೊಂದಿಷ್ಟು ಕಾರಣಗಳಿವೆ ಎಂದು ಕನ್ನಡ ಪರ ಹೋರಾಟಗಾರ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ರೂಪೇಶ್‌ ರಾಜಣ್ಣ ಅವರು ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಸುದೀಪ್‌ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

Advertisement

“ಈಗಿನ ಸೀಸನ್‌ ನಲ್ಲಿ ಕನ್ನಡ ಬಳಕೆ ಹೆಚ್ಚಾಗಿ ಆಗುತ್ತಿಲ್ಲ. ಈ ಹಿಂದಿನ ಸೀಸನ್‌ ಗಳಲ್ಲಿ ಸ್ಪರ್ಧಿಗಳು ಇಂಗ್ಲಿಷ್‌ ನಲ್ಲಿ ಮಾತನಾಡಿದರೆ ಆಗ ಬಿಗ್‌ ಬಾಸ್‌ ಮನೆಯಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಎಂಬ ಹಾಡನ್ನು ಹಾಕಲಾಗುತ್ತಿತ್ತು. ಕಳೆದ ಎರಡು ವರ್ಷದಲ್ಲಿ ಇದನ್ನು ಕೈಬಿಡಲಾಗಿದೆ. ಸುದೀಪ್‌ ಅವರು ಈ ಬಗ್ಗೆ ಆಯೋಜಕರಲ್ಲಿ ಹೇಳಿದ್ದು, ಇದಕ್ಕೆ ಆಯೋಜಕರು ಒಪ್ಪಿಲ್ಲ ಇದು ಸುದೀಪ್‌ ಅವರಿಗೆ ಬೇಸರ ತರಿಸಿದೆ” ಎಂದು ರೂಪೇಶ್‌ ರಾಜಣ್ಣ ಹೇಳಿದ್ದಾರೆ.

ಬಿಗ್‌ ಬಾಸ್‌ ಶೋನಲ್ಲಿ ಹಲವು ಬದಲಾವಣೆ ಆಗಿದೆ. ಕಾರ್ಯಕ್ರಮದ ನಿರ್ದೇಶಕರು ಬದಲಾಗಿದ್ದು, ಅವರು ತಮಿಳಿನವರಾಗಿದ್ದಾರೆ. ಶೋ ಆಯೋಜಕಿ ಮರಾಠಿಯವರಾಗಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಾರಿ ಬಿಗ್‌ ಬಾಸ್‌ ಮನೆಯನ್ನು ಸ್ವರ್ಗ – ನರಕದ ಕಾನ್ಸೆಪ್ಟ್‌ ನಲ್ಲಿ ಮಾಡಲಾಗಿತ್ತು. ಆದರೆ ನರಕದಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ವ್ಯವಸ್ಥೆ ಮಾಡುವಂತೆ ಸುದೀಪ್ ಹೇಳಿದ್ದರು. ವೀಕೆಂಡ್‌ನಲ್ಲಿ ನರಕದ ಸ್ಪರ್ಧಿಗಳ ನಿಂತುಕೊಂಡೇ ಇರಬೇಕಿತ್ತು. ಅವರಿಗೆ ಕೂರಿಸಿ ಮಾತನಾಡಿಸಬೇಕೆಂದು ಕಿಚ್ಚ ಆಯೋಜಕರಲ್ಲಿ ಹೇಳಿದ್ದರು. ಆದರೆ ಈ ಮಾತಿಗೂ ಆಯೋಜಕರು ಸ್ಪಂದಿಸಿಲ್ಲವೆಂದು ಎಂದು ವಿಡಿಯೋದಲ್ಲಿ ರೂಪೇಶ್ ಹೇಳಿದ್ದಾರೆ.

ಅಲ್ಲದೇ ಈ ಬಾರಿ ಬಿಗ್ ಬಾಸ್ ಪ್ರಾಯೋಜಕತ್ವವನ್ನು ಎ23ರಮ್ಮಿ ಆಪ್ ಪಡೆದುಕೊಂಡಿದೆ. ಈ ಹಿನ್ನೆಲೆ ರಮ್ಮಿ ಆಪ್ ಹೆಸರು ತೆಗೆದುಕೊಳ್ಳಲು ಇರಿಸು ಮುರಿಸಾಗುತ್ತದೆ ಎಂದು ಸುದೀಪ್ ಹೇಳಿದ್ದರು. ಈ ಹೆಸರಿನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಸಿ ಎಂದು ಕೇಳಿದ್ದರು. ಆದರೆ ಇದಕ್ಕೂ ಕೂಡ ಆಯೋಜಕರು ಒಪ್ಪಲಿಲ್ಲ.

ಈ ಎಲ್ಲ ಕಾರಣದಿಂದ ಕಿಚ್ಚ ಅವರು ಬಿಗ್‌ ಬಾಸ್‌ ಜರ್ನಿಗೆ ವಿದಾಯ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ಸೀಸನ್‌ ನಲ್ಲಿ ಕಿಚ್ಚ ಅವರ ಸ್ಥಾನಕ್ಕೆ ಯಾರು ಬಿಗ್‌ ಬಾಸ್‌ ಹೋಸ್ಟ್‌ ಆಗಿ ಬರುತ್ತಾರೆ ಎನ್ನುವುದನ್ನು ಕಾದನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next