Advertisement

ಇಂದಿನಿಂದ “ಬಿಗ್‌ಬಾಸ್‌ ಸೀಸನ್‌ -7′ಶುರು

10:50 AM Oct 14, 2019 | Team Udayavani |

ಬಿಗ್‌ಬಾಸ್‌ ಸೀಸನ್‌ -7ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಅ.13) ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಅದ್ಧೂರಿಯಾಗಿ ಲಾಂಚ್‌ ಆಗಲಿದೆ. ಬಳಿಕ ಪ್ರತಿ ರಾತ್ರಿ 9 ಗಂಟೆಗೆ ಬಿಗ್‌ಬಾಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಳೆದ ಎರಡು ವರ್ಷಗಳ ಕಾಲ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಬಿಗ್‌ಬಾಸ್‌ ಶೋ ಈಗ ಮತ್ತೆ ಕಲರ್ಸ್‌ ಕನ್ನಡಕ್ಕೆ ವಾಪಸ್ಸಾಗಿದೆ. ನೂರು ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಡಲಿದ್ದಾರೆ.

Advertisement

ಈ ಹಿಂದಿನ ಒಂದೆರಡು ಸೀಸನ್‌ಗಳಲ್ಲಿ ಸೆಲೆಬ್ರೆಟಿಗಳ ಹೊರತಾಗಿಯೂ ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ, ಈ ಬಾರಿ ಆ ತರಹದ ಸ್ಪರ್ಧಿಗಳಿಗೆ ಅವಕಾಶವಿಲ್ಲ. ಬಿಗ್‌ಬಾಸ್‌ ಸೀಸನ್‌ -7ನಲ್ಲಿ ಭಾಗವಹಿಸುವ 17 ಮಂದಿಯೂ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರೆಟಿಗಳೇ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಲಿದ್ದಾರೆ.

ವಯಾಕಾಂ 18 ಕನ್ನಡ ಎಂಟರ್‌ಟೈನ್ಮೆಂಟ್‌ ಕ್ಲಸ್ಟರ್‌ನ ಬಿಝಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಪ್ರಕಾರ, ಬಿಗ್‌ಬಾಸ್‌ ಬೇರೆ ರಿಯಾಲಿಟಿ ಶೋಗಳಿಗಿಂತ ಭಿನ್ನವಾದ ರಿಯಾಲಿಟಿ ಶೋ. “ಬಿಗ್‌ಬಾಸ್‌ ಶೋ ಇದು ಮನರಂಜನೆ ಹಾಗೂ ಭಾವನೆಗಳ ಹದವಾದ ಮಿಶ್ರಣ. ಹದವಾದ ಮಿಶ್ರಣವನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಆದರೆ, ಎಲ್ಲಾ ಸೆಲೆಬ್ರೆಟಿಗಳನ್ನು ಗೌರವಿಸುವ ಸುದೀಪ್‌ ಅವರು ನಮ್ಮ ಜೊತೆ ಇರುವುದರಿಂದ ಈ ಸವಾಲನ್ನು ಸ್ವೀಕರಿಸಲು ಕಷ್ಟವಾಗಲಾರದು. ಎಲ್ಲರಿಗೂ ಬುದ್ಧಿ ಹೇಳಬಹುದಾದ ಅವರ ಎತ್ತರದ ಸ್ಥಾನವೇ ಶೋ ನಡೆಸುವ ನಮ್ಮ ಕೆಲಸವನ್ನು ಸರಳವಾಗಿಸಿದೆ’ ಎನ್ನುತ್ತಾರೆ ಪರಮೇಶ್ವರ ಗುಂಡ್ಕಲ್‌.

ಈಗಾಗಲೇ ಆರು ಸೀಸನ್‌ಗಳನ್ನು ನಡೆಸಿಕೊಟ್ಟು, ಈಗ ಏಳನೇ ಸೀಸನ್‌ಗೆ ಅಣಿಯಾಗಿರುವ ಸುದೀಪ್‌ ಅವರಿಗೆ ಈಗ ಬಿಗ್‌ಬಾಸ್‌ ಮನೆ ಜೊತೆ ಒಂದು ನಂಟು ಬೆಳೆದಿದೆಯಂತೆ. ಮುಖ್ಯವಾಗಿ ಬಿಗ್‌ಬಾಸ್‌ ಶೋ ಸುದೀಪ್‌ ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆಯಂತೆ. ಜೊತೆಗೆ ತಮ್ಮ ಬಗ್ಗೆ ಹೊರಗಡೆ ಇದ್ದ ಅಭಿಪ್ರಾಯವನ್ನೂ ಬದಲಿಸಿದೆಯಂತೆ. “ಬಿಗ್‌ಬಾಸ್‌ ಮೂಲಕ ನಾನು ಜನರಿಗೆ ಮತ್ತಷ್ಟು ಹತ್ತಿರವಾದೆ. ಜೊತೆಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯವೂ ಬದಲಾಗಿದೆ.

ಈಗ ಬಿಗ್‌ಬಾಸ್‌ ಪೇಮೆಂಟ್‌ಗಿಂತ ದೊಡ್ಡ ಕಮಿಟ್‌ಮೆಂಟ್‌ ಆಗಿದೆ. ಅಲ್ಲಿ ನನಗೆ ಆದ ಒಂದು ಮನೆ ಇದೆ. ಎಲ್ಲೇ ಇದ್ದರೂ ವಾರಾಂತ್ಯದಲ್ಲಿ ಅಲ್ಲಿಗೆ ಬರುತ್ತೇನೆ’ ಎನ್ನುವ ಸುದೀಪ್‌ ಅವರಿಗೆ ಮೊದಲ ಸೀಸನ್‌ನ ಸ್ಪರ್ಧಿಗಳು ಇಷ್ಟವಂತೆ. ಏಕೆಂದರೆ ಅದು ಕನ್ನಡ ಮೊದಲ ಸೀಸನ್‌ ಆಗಿದ್ದ ಕಾರಣ ಎಲ್ಲರೂ ಅಮಾಯಕರಾಗಿ, ತಾವು ತಾವಾಗಿಯೇ ಇದ್ದರು. ಯಾರೂ ಕೂಡಾ ಸ್ಟ್ರಾಟಜಿ ಮಾಡಿ, ಮುಖವಾಡ ಹಾಕಿಕೊಂಡು ಆಟವಾಡಿರಲಿಲ್ಲ ಎಂಬುದು ಸುದೀಪ್‌ ಅವರ ಇಷ್ಟಕ್ಕೆ ಕಾರಣವಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next