ಮುಂಬೈ: ಶಿವಸೇನಾ ಅಧ್ಯಕ್ಷ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪತ್ನಿ ರಶ್ಮಿ ಠಾಕ್ರೆ, ಮಕ್ಕಳಾದ ಆದಿತ್ಯ ಮತ್ತು ತೇಜಸ್ ಠಾಕ್ರೆಯ ಅಕ್ರಮ ಆಸ್ತಿಗಳ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕೆಂದು ಕೋರಿ ಬಾಂಬೆ ಹೈಕೋರ್ಟ್ ಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ದಾಖಲಾಗಿದ್ದು, ಉದ್ಧವ್ ಠಾಕ್ರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಂತಾಗಿದೆ.
ಇದನ್ನೂ ಓದಿ:ಠಾಣೆಗೆ ಹೋಗಿ ಅಮ್ಮನ ವಿರುದ್ಧ ದೂರು ಕೊಟ್ಟ 3 ವರ್ಷದ ಬಾಲಕ!ವಿಡಿಯೋ ನೋಡಿ ಸಚಿವರಿಂದ ಉಡುಗೊರೆ
ಠಾಕ್ರೆ ಕುಟುಂಬದ ವಿರುದ್ಧ ದಾಖಲಾದ ಪಿಐಎಲ್ ವಿಚಾರಣೆ ಇಂದು ಸಂಜೆ ಬಾಂಬೆ ಹೈಕೋರ್ಟ್ ನಲ್ಲಿ ನಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಮುಂಬೈ ನಿವಾಸಿಗಳಾದ ಗೌರಿ ಮತ್ತು ಅಭಯ್ ಭಿಡೆ ಬಾಂಬೆ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ.
ಉದ್ದವ್ ಠಾಕ್ರೆ ಕುಟುಂಬದ ಸದಸ್ಯರು ಕಾನೂನು ಬಾಹಿರವಾಗಿ ಭಾರೀ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದಿಸಿರುವುದಾಗಿ ಪಿಐಎಲ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದ್ದು, ಪಿಐಎಲ್ ಸಲ್ಲಿಸಿದ್ದ ದಾದರ್ ನಿವಾಸಿ ಅಭಯ್ ಭಿಡೆ ಶಿವಸೇನಾ ಮುಖಂಡರಾಗಿದ್ದಾರೆ ಎಂದು ತಿಳಿಸಿದೆ.
ಠಾಕ್ರೆಯ ಪ್ರಬೋಧನ್ ಪ್ರಕಾಶನ ಪ್ರೈವೇಟ್ ಲಿಮಿಟೆಡ್ 42 ಕೋಟಿ ರೂಪಾಯಿ ಆದಾಯಗಳಿಸಿದ್ದು, ಇದರ ಒಟ್ಟು ಲಾಭ 11.5 ಕೋಟಿ ರೂಪಾಯಿಯಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಪಿಐಎಲ್ ನಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.