ನವದೆಹಲಿ: ಭಾರತದ ಖ್ಯಾತ ಉದ್ಯಮಸಂಸ್ಥೆಗಳಲ್ಲೊಂದಾಗಿದ್ದ ಅದಾನಿ ಗ್ರೂಪ್ಸ್ ವಿರುದ್ಧ ಹಿಂಡನ್‌ಬರ್ಗ್ ಎನ್ನುವ ವಿದೇಶಿ ಸಂಸ್ಥೆ ಮಾಡಿದ್ದ ಆರೋಪವು ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಸಂಸ್ಥೆಗೆ ಹಲವು ಬಗೆಯ ನಷ್ಟಕ್ಕೂ ಕಾರಣವಾಗಿತ್ತು. ಈ ವಿಚಾರ ಮಾಸುವ ಮುನ್ನವೇ ಇದೀಗ ಭಾರತೀಯ ಸಂಸ್ಥೆಗಳನ್ನೇ ಗುರಿಯಾಗಿಸಿ, ಅವುಗಳ ವರ್ಚಸ್ಸನ್ನು ಕುಗ್ಗಿಸಲು ಅಂತಾರಾಷ್ಟ್ರೀಯ ಮಟ್ಟದ ಜಾಲವೊಂದು ಸೃಷ್ಟಿಯಾಗಿದೆ ಎಂದು ಮೂಲಗಳು ಹೇಳಿವೆ.
ಭಾರತದ ಖ್ಯಾತ ಉದ್ಯಮಗಳು, ಕಂಪನಿಗಳನ್ನು ಗುರಿಯಾಗಿಸಿ, ಸತ್ಯಶೋಧದ ಹೆಸರಿನಲ್ಲಿ ಅವುಗಳ ಬಗ್ಗೆ ವರದಿ ತಯಾರಿಸಲೆಂದೇ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್‌ಪಿ) ಎನ್ನುವ ಸಂಸ್ಥೆಯನ್ನು ಸೃಷ್ಟಿಸಲಾಗಿದೆ.
ಅಮೆರಿಕ ಮೂಲದ ಖ್ಯಾತ ಉದ್ಯಮಿ ಜಾರ್ಜ್ ಸೊರೊಸ್ ಹಾಗೂ ನ್ಯೂಯಾರ್ಕ್ ಮೂಲದ ಸಂಸ್ಥೆ ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್ ಈ ಸಂಸ್ಥೆಗಳಿಗೆ ಹೂಡಿಕೆ ಮಾಡಿದ್ದು, ಇವುಗಳ ಮೂಲ ಉದ್ದೇಶವೇ ಭಾರತೀಯ ಮೂಲದ ಉದ್ಯಮಗಳ ವಿರುದ್ಧದ ವರದಿ ತಯಾರಿಸುವುದಾಗಿದೆ ಎಂದು ಪಿಟಿಐ ವರದಿಯೊಂದರಲ್ಲಿ ತಿಳಿಸಿದೆ.
ಒಸಿಸಿಆರ್‌ಪಿ ತನ್ನ ವೆಬ್‌ಸೈಟ್‌ನಲ್ಲಿ ಇದೊಂದು ಜಾಗತಿಕ ತನಿಖಾ ಪತ್ರಕರ್ತರನ್ನು ಒಳಗೊಂಡಿರುವ, ಉದ್ಯಮಗಳ ಭ್ರಷ್ಟಾಚಾರಗಳನ್ನು ಸಮಾಜದ ಮುಂದೆ ತೆರೆದಿಡುವ ಸಂಸ್ಥೆ ಎಂದು ಹೇಳಿಕೊಂಡಿದೆ. ಆದರೆ, ವಿದೇಶಿ ಉದ್ಯಮಿಗಳ ಹೂಡಿಕೆ ಹೊಂದಿರುವ ಈ ಸಂಸ್ಥೆ ಗುರಿಯಾಗಿಸುತ್ತಿರುವುದು ಮಾತ್ರ ಭಾರತೀಯ ಸಂಸ್ಥೆಗಳನ್ನು. ಸಾಲು- ಸಾಲು ಲೇಖನಗಳು, ವರದಿಗಳು ಪ್ರಕಟವಾಗಿರುವುದೂ ಕೂಡ ಭಾರತೀಯ ಸಂಸ್ಥೆಗಳ ಬಗ್ಗೆಯೇ ಎಂಬುದು ಗಮನಾರ್ಹ.
ಅಲ್ಲದೇ, ಅದಾನಿ ಗ್ರೂಪ್ಸ್ ಬಗ್ಗೆ ಹಿಂಡನ್‌ಬರ್ಗ್ ಆರೋಪಗಳನ್ನು ಪರಿಗಣಿಸಿ, ಖುದ್ದು ಪ್ರಧಾನಿ ಮೋದಿ ಅವರೇ ಇದಕ್ಕೆ ಉತ್ತರ ನೀಡಬೇಕೆಂದು ಹೊಣೆಯಾಗಿಸಲು ಹೊರಟಿದಿದ್ದು ಇದೇ ಸಂಸ್ಥೆಯ ಹೂಡಿಕೆದಾರ ಜಾರ್ಜ್ ಸೊರೊಸ್. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಥೆಗಳ ಪೈಪೋಟಿ ಹೆಚ್ಚುತ್ತಿರುವ ನಡುವೆಯೇ, ಇಂಥದ್ದೊಂದು ಜಾಲ ಸೃಷ್ಟಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.