ರಾಯಚೂರು: ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿರುವ ಕರ್ನಾಟಕ ಭೂ ಸ್ವಾಧಿಧೀನ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಮ್ಮಿಶ್ರ ಸರ್ಕಾರವು ಕಳೆದ ಅಧಿ ವೇಶನದಲ್ಲಿ ಅಂಗೀಕರಿಸಿದ ಈ ಮಸೂದೆಯಿಂದ ರಾಜ್ಯದ ರೈತರ ಬದುಕು ಅತಂತ್ರಕ್ಕೆ ಸಿಲುಕಲಿದೆ. ಒಂದೆಡೆ ಬರದಿಂದ ಬೆಳೆ ಇಲ್ಲದೇ ರೈತರು ಹಾಳಾಗಿದ್ದರೆ, ಮತ್ತೂಂದೆಡೆ ಉದ್ಯೋಗ ಸಿಗದೆ ಬದುಕು ದುಸ್ತರವಾಗಿದೆ. ಇಂಥ ವೇಳೆ ಬೇಕಾಬಿಟ್ಟಿ ಭೂ ಸ್ವಾ ಧೀನಕ್ಕೆ ಅವಕಾಶ ನೀಡುವ ಮಸೂದೆಗೆ ಸದನ ಅಂಗೀಕಾರ ನೀಡಿರುವುದು ಖಂಡನೀಯ ಎಂದರು.
ಈ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕೈಗಾರಿಕೆ ಇತರ ಯೋಜನೆಗಾಗಿ ಕಳೆದ 25 ವರ್ಷದಿಂದ ಸ್ವಾಧೀನಪಡಿಸಿಕೊಂಡ ಲಕ್ಷಾಂತರ ಎಕರೆ ಭೂಮಿ ನಿರುಪಯುಕ್ತವಾಗಿದ್ದು, ಕೂಡಲೇ ಬಿಟ್ಟುಕೊಡಬೇಕು. ಅಕ್ರಮ-ಸಕ್ರಮ ಕಾಯ್ದೆಯಡಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸುವ ಅವಧಿ ಆರು ತಿಂಗಳವರೆಗೆ ವಿಸ್ತರಿಸಬೇಕು. ಜಾತಿ ಪ್ರಮಾಣ ಪತ್ರ ಹಾಗೂ ಇತರ ದಾಖಲೆ ಕಡ್ಡಾಯಗೊಳಿಸಿದ್ದರಿಂದ ಅರ್ಜಿ ಸಲ್ಲಿಕೆಗೆ ಸಮಸ್ಯೆಯಾಗುತ್ತಿದೆ. ನಿಯಮ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಲಿಂಗಸುಗೂರು ತಾಲೂಕಿನ ಗುಂತಗೋಳ, ಐದಬಾವಿ ಯರಡೋಣ ಗ್ರಾಮದ ಭೂ ಸಾಗುವಳಿದಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು. ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಜನ ಕೆಲಸವಿಲ್ಲದೇ ಗುಳೆ ಹೊರಟಿದ್ದು, ಉದ್ಯೋಗ ಖಾತ್ರಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕೂಲಿ ಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಕಂಪನಿ ಹಾಗೂ ಪ್ರಭಾವಿಗಳ ಸರ್ವೆ ನಡೆಸಬೇಕು. ರಾಜ್ಯ ಸರ್ಕಾರ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿ ವಾಸ್ತವ ಪರಿಸ್ಥಿತಿ ವಿವರಿಸಬೇಕು ಎಂದು ಒತ್ತಾಯಿಸಿದರು. ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ, ಜಿಲ್ಲಾಧ್ಯಕ್ಷ ಶೇಖರಯ್ಯ, ಜಿಲ್ಲಾ ಕಾರ್ಯದರ್ಶಿ ಪರಶುರಾಮ, ಸದಸ್ಯರಾದ ರಮೇಶ ಪಾಟೀಲ ಬೇರಗಿ, ವಿರುಪಾಕ್ಷಿಗೌಡ, ಗೌಸ್‌ಖಾನ್, ಸಂತೋಷ ದಿನ್ನಿ, ಬಸವರಾಜ ಬೆಳಗುರ್ಕಿ, ವೆಂಕೋಬ ನಾಯಕ ಸೇರಿ ಅನೇಕರು ಪಾಲ್ಗೊಂಡಿದ್ದರು.