ವಿಜಯಪುರ: ಕರ್ನಾಟಕದ ಬಿಜೆಪಿ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಅಸಮಾಧಾನ ಇದ್ದು, ಕೆಲವೇ ದಿನಗಳಲ್ಲಿ ಸ್ಫೋಟ ಆಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಂಬ್ ಸಿಡಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ಶುದ್ಧೀಕರಣ ಆಗಲೇಬೇಕು, ಕುಟುಂಬದ ಪಕ್ಷವಾಗಲು ಬಿಡುವುದಿಲ್ಲ ಎಂದರು.
ಈಶ್ವರಪ್ಪ ಅವರಿಗೆ ಅನ್ಯಾಯ ಮಾಡಿದರು. ಪ್ರಧಾನ ಮಂತ್ರಿ ಹೇಳಿದ್ದಾರೆಂಬ ಒಂದೇ ಮಾತಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದೆ ಪಕ್ಷದ ಕೆಲಸ ಮಾಡಿದರು. ಅಂಥಹ ಒಳ್ಳೆಯವರನ್ನೇ ಪಕ್ಷದಿಂದ ಹೊರಹಾಕಿದ್ದಾರೆ. ಬಿಜೆಪಿ ಹೆಸರ ಪಕ್ಷವನ್ನು ಕುಟುಂಬದ ಪಕ್ಷವಾಗಲು ನಾವು ಬಿಡುವುದಿಲ್ಲ ಎಂದು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಸೋತವರೆಲ್ಲ ಬಿಜೆಪಿ ಸೋಲಿಗೆ ಕಾರಣವೆಂದು ಅಲ್ಲಲ್ಲಿ ಅಟಾಮ್ ಬಾಂಬ್ ಬೀಳಲು ಆರಂಭಿಸಿವೆ. ದಾವಣಗೆರೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಏನೆಂದು ಸಿದ್ಧೇಶ್ವರ ಹೇಳಿದ್ದಾರೆ. ಇನ್ನು ಒಂದೊಂದೆ ಬಾಂಬ್ ಹೊರ ಬೀಳಲಿವೆ. ಬಳ್ಳಾರಿ, ಕೊಪ್ಪಳ, ರಾಯಚೂರು ಬರ್ತದೆ. ಸೋಲಿಗೆ ಕಾರಣ ಏನೆಂದು ವಿಜಯೇಂದ್ರ ಬಾಯಿ ಬಿಡಲಿ ಎಂದು ಆಗ್ರಹಿಸಿದರು.
ನನ್ನನ್ನು ಮುಗಿಸಲು ಕುತಂತ್ರ ನಡೆಸಿದ್ದು, ಇಂಥದ್ದನ್ನೆಲ್ಲ ಬಿಡಬೇಕು. ಯತ್ನಾಳ ಹಿರಿಯರು ಎಂಬ ಡೈಲಾಗ್ ಬಿಡಲಿ. ಸುಮ್ಮನೆ ಇದ್ದರೆ ಸರಿ. ಅವರೇನಾದರೂ ಆಟವಾಡಿದರೆ ನಮಗೂ ಆಟ ಆಡಲು ಬರುತ್ತದೆ ಎಂದು ಎಚ್ಚರಿಸಿದರು.
ಮಾಧ್ಯಮಗಳು ಯತ್ನಾಳ ವಿಪಕ್ಷದ ನಾಯಕನಿಗಿಂತ ಹೆಚ್ಚು ಕೆಲಸ ಮಾಡಿದ್ದಾಗಿ ಮಾಧ್ಯಮಗಳು ಸರ್ಟಿಫಿಕೇಟ್ ನೀಡಿದ್ದು, ಇದಕ್ಕಾಗಿ ಮಾಧ್ಯಮಗಳಿಗೆ ಅಭಿನಂದನೆ ಎಂದರು.