Advertisement

ವನಿತಾ ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆ ಅನಗತ್ಯ: ಶಿಖಾ ಪಾಂಡೆ

10:30 PM Jun 28, 2020 | Sriram |

ಹೊಸದಿಲ್ಲಿ: ವನಿತಾ ಕ್ರಿಕೆಟಿನ ಆಕರ್ಷಣೆ ಹೆಚ್ಚಿಸಲು ಹಾಗೂ ಇದನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕೆಂಬ ಕಾರಣಕ್ಕಾಗಿ ಯದ್ವಾತದ್ವ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂಬುದಾಗಿ ಭಾರತದ ಸೀನಿಯರ್‌ ಪೇಸ್‌ ಬೌಲರ್‌ ಶಿಖಾ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಇತ್ತೀಚೆಗೆ ನ್ಯೂಜಿಲ್ಯಾಂಡ್‌ ವನಿತಾ ತಂಡದ ನಾಯಕಿ ಸೋಫಿ ಡಿವೈನ್‌, ಭಾರತದ ಉದಯೋನ್ಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಅವರೆಲ್ಲ ವನಿತಾ ಕ್ರಿಕೆಟ್‌ ಜನಪ್ರಿಯತೆಗೆ ನಾನಾ ಸಲಹೆ ಗಳನ್ನು ಮುಂದಿರಿಸಿದ್ದರು. ಸಣ್ಣ ಚೆಂಡು, ಕಿರಿದಾದ ಬೌಂಡರಿ, ಕ್ರೀಸ್‌ ಅಂತರವನ್ನು ಕಡಿಮೆಗೊಳಿಸುವುದು… ಹೀಗೆ ವಿವಿಧ ಸಲಹೆಗಳನ್ನು ಮಾಡಿದ್ದರು.

“ಈ ಸಲಹೆಗಳನ್ನೆಲ್ಲ ಗಮನಿಸಿದ್ದೇನೆ. ವನಿತಾ ಕ್ರಿಕೆಟ್‌ ಬೆಳವಣಿಗೆ ಹಾಗೂ ಆಕರ್ಷಣೆಯ ನಿಟ್ಟಿನಲ್ಲಿ ಇಂಥ ಬದಲಾವಣೆ ತರಬೇಕೆಂದು ಸೂಚಿಸ ಲಾಗಿದೆ. ಆದರೆ ವೈಯಕ್ತಿಕವಾಗಿ ಹೇಳಬೇ ಕೆಂದರೆ, ಇವೆಲ್ಲವೂ ಅತಿಯಾಗಿವೆ…’ ಎಂಬುದಾಗಿ ಇಂಡಿಯನ್‌ ಏರ್‌ ಫೋರ್ಸ್‌ನಲ್ಲಿ ಆಫೀಸರ್‌ ಆಗಿ ಕರ್ತವ್ಯ ನಿಭಾಯಿಸುತ್ತಿರುವ 31ರ ಹರೆಯದ ಶಿಖಾ ಪಾಂಡೆ ಹೇಳಿದರು.

“ಒಲಂಪಿಕ್ಸ್‌ನಲ್ಲಿ ವನಿತಾ ಸ್ಪ್ರಿಂಟರ್ 100 ಮೀ. ರೇಸ್‌ ವೇಳೆ ಕೇವಲ 80 ಮೀ. ಓಡಿ ಪದಕವನ್ನೇನೂ ಗೆಲ್ಲುವುದಿಲ್ಲ. ಅವರೂ ಪುರುಷರಂತೆ 100 ಮೀ. ದೂರವನ್ನೇ ಕ್ರಮಿಸಬೇಕು. ಹೀಗಿರುವಾಗ ವನಿತಾ ಕ್ರಿಕೆಟ್‌ನಲ್ಲಿ ಬದಲಾವಣೆ ತರುವ ಉದ್ದೇಶ ಅರ್ಥವಾಗುತ್ತಿಲ್ಲ…’ ಎಂದರು.

“ದಯವಿಟ್ಟು ಬೌಂಡರಿ ಅಂತರವನ್ನು ಕಡಿಮೆ ಮಾಡಬೇಡಿ. ವನಿತೆಯರಲ್ಲೂ ಈಗ ಸಾಕಷ್ಟು ಮಂದಿ ಪವರ್‌ ಹಿಟ್ಟರ್ ಇದ್ದಾರೆ. ಇವರ ಸಾಮರ್ಥ್ಯವನ್ನೊಮ್ಮೆ ನೋಡಿ. ಇದು ಕೇವಲ ಆರಂಭ ಮಾತ್ರ. ನಾವು ಇನ್ನಷ್ಟು ಸುಧಾರಿತ, ರೋಚಕ ಪ್ರದರ್ಶನ ನೀಡಲಿದ್ದೇವೆ. ಅಲ್ಲಿಯ ತನಕ ದಯವಿಟ್ಟು ತಾಳ್ಮೆಯಿಂದಿರಿ…’ ಎಂದಿದ್ದಾರೆ ಶಿಖಾ ಪಾಂಡೆ.

Advertisement

ತಂತ್ರಜ್ಞಾನಗಳೇಕಿಲ್ಲ?
“ವನಿತಾ ಕ್ರಿಕೆಟ್‌ನಲ್ಲೇಕೆ ಡಿಆರ್‌ಎಸ್‌, ಸ್ನಿಕೊ, ಹಾಟ್‌ಸ್ಪಾಟ್‌ ಮೊದಲಾದ ತಂತ್ರ ಜ್ಞಾನಗಳನ್ನು ಇನ್ನೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ? ನಾವು ಆಡುವ ಎಲ್ಲ ಪಂದ್ಯಗಳನ್ನೇಕೆ ನೇರ ಪ್ರಸಾರ ಮಾಡುವುದಿಲ್ಲ? ಇವುಗಳಿಂದಲೂ ವನಿತಾ ಕ್ರಿಕೆಟನ್ನು ಜನಪ್ರಿಯಗೊಳಿಸಲು ಸಾಧ್ಯವಿಲ್ಲವೇ?’ ಎಂದು ಶಿಖಾ ಪಾಂಡೆ ಪ್ರಶ್ನೆಗಳ ಸುರಿಮಳೆಗೈದರು.

ವಿಶ್ವಕಪ್‌ ಫೈನಲ್‌ ಒಂದೇ ಸಾಕು…
“ಎಂಸಿಜಿಯಲ್ಲಿ ಕಳೆದ ಮಾ. 8ರಂದು ನಡೆದ ಭಾರತ-ಆಸ್ಟ್ರೇಲಿಯ ನಡುವಿನ ಟಿ20 ವಿಶ್ವಕಪ್‌ ಫೈನಲ್‌ಗೆ 86 ಸಾವಿರದಷ್ಟು ವೀಕ್ಷಕರು ಸಾಕ್ಷಿಯಾಗಿದ್ದಾರೆ, ಈ ಪಂದ್ಯವನ್ನು ಲಕ್ಷಾಂತರ ಮಂದಿ ಟೆಲಿವಿಷನ್‌ನಲ್ಲಿ ವೀಕ್ಷಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ನಮ್ಮ ಆಟದಲ್ಲೇನೋ ವಿಶೇಷವಿದೆ ಎಂಬುದು ಇದರರ್ಥವಲ್ಲವೇ…’ ಎಂದು ಶಿಖಾ ಪಾಂಡೆ ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next