Advertisement

“ಲಿಂಗಾಯತ’ಮಾನ್ಯತೆಗಾಗಿ ಬೃಹತ್‌ ಬೈಕ್‌ ರ್ಯಾಲಿ

12:14 PM Apr 16, 2018 | Team Udayavani |

ಬೀದರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ರವಿವಾರ ನಗರದಲ್ಲಿ ಬೈಕ್‌ಗಳ ಬೃಹತ್‌ ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಯಿತು.

Advertisement

ಪ್ರತ್ಯೇಕ ಧರ್ಮದ ಮಾನ್ಯತೆಗೆ ಒತ್ತಾಯಿಸಿ ಬೀದರನಿಂದಲೇ ಬೃಹತ್‌ ಲಿಂಗಾಯತ ಮಹಾರ್ಯಾಲಿ ಆರಂಭಗೊಂಡು ನಂತರ ರಾಜ್ಯ ಮತ್ತು ನೆರೆ ರ್ಯಾಜ್ಯಗಳಿಗೂ ವ್ಯಾಪಿಸಿತ್ತು. ಈ ಕುರಿತು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಹಾಗಾಗಿ ರವಿವಾರ ಬಸವ ಜಯಂತಿ ಉತ್ಸವ ಸಮಿತಿ ನೇತೃತ್ವದಲ್ಲಿ ಬೈಕ್‌ ರ್ಯಾಲಿ ನಡೆಸಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಸುಮಾರು 2018 ಬೈಕ್‌ಗಳೊಂದಿಗೆ ರ್ಯಾಲಿ ನಡೆಸಿ ಬಸವ ಜಯಂತಿ ಪ್ರಚಾರದ ಜತೆಗೆ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಲಾಯಿತು. ನಗರದ ನೆಹರು ಕ್ರೀಡಾಂಗಣದಿಂದ ಆರಂಭಗೊಂಡ ರ್ಯಾಲಿಯು ಚೌಬಾರಾ, ಬಸವೇಶ್ವರ ವೃತ್ತ, ಬೊಮ್ಮಗೊಂಡ ವೃತ್ತ, ಸಿದ್ಧಾರೂಢ ಆಶ್ರಮ, ಗುದಗೆ ಆಸ್ಪತ್ರೆ, ರೋಟರಿ ವೃತ್ತದ ಮೂಲಕ ಹಾದು ಪಾಪನಾಶಿನಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.

ತಲೆಗೆ ರುಮಾಲು ಮತ್ತು ಹೆಗಲ ಮೇಲೆ ಸ್ಕಾರ್ಪ್‌ ಧರಿಸಿದ್ದ 200ಕ್ಕೂ ಹೆಚ್ಚು ಮಹಿಳೆಯರು ಬೈಕ್‌ ರ್ಯಾಲಿಯನ್ನು ಮುನ್ನಡೆಸಿದರು. ಬೈಕ್‌ಗಳಿಗೆ ಬೃಹತ್‌ ಬಸವ ಧ್ವಜ ಅಳವಡಿಸಿ ಬಸವ ಜಯಘೋಷಗಳನ್ನು ಕೂಗಿದರು. ಸಾವಿರಾರು ಬಸವ ಅನುಯಾಯಿಗಳು ಭಾಗವಹಿಸಿದ್ದರು.

ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಬಸವ ಜಯಂತಿ ಮಾನವೀಯತೆ ಮತ್ತು ದೀನ ದಲಿತರ ಉತ್ಸವ. ಈ ಜಯಂತಿ ಅರಿವಿನ ಉತ್ಸವ, ರಾಷ್ಟ್ರದ ಉತ್ಸವವಾಗಬೇಕು. ನಾವು ಬಸವ ಅಭಿಮಾನಿಗಳು ಆಗುವುದಕ್ಕಿಂತ ಬಸವ ಅನುಯಾಯಿಗಳಾಗಿ ಶರಣರ ತತ್ವಗಳನ್ನು ನಿಜ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಕೇಂದ್ರದ ಗಮನ ಸೆಳೆಯಲು ಈ ರ್ಯಾಲಿ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಂಬಿಕೆ ಅಕ್ಕ ಮಾತನಾಡಿ, ವಿಶಿಷ್ಟ ಧರ್ಮ ಲಿಂಗಾಯಕ್ಕೆ ಪ್ರತ್ಯೇಕ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿರುವುದರಿಂದ 2018ರ ಬಸವ ಜಯಂತಿ ನಮಗೆಲ್ಲರಿಗೂ ಸಂಭ್ರಮದ ಉತ್ಸವವಾಗಿದೆ. ಬಸವಣ್ಣನ ವಿಚಾರಗಳು ದೇಶ ಮಾತ್ರವಲ್ಲದೇ ವಿಶ್ವದ ಜನ ಮನಕ್ಕೆ ಮುಟ್ಟಿಸುವ ಪ್ರಯತ್ನಗಳು ಆಗಬೇಕಿದೆ ಎಂದರು.

ರ್ಯಾಲಿಯಲ್ಲಿ ಪ್ರಮುಖರಾದ ಬಾಬು ವಾಲಿ, ಡಾ| ರಜನೀಶ ವಾಲಿ, ಡಾ| ಶೈಲೆಂದ್ರ ಬೆಲ್ದಾಳೆ, ಗುರುನಾಥ ಕೊಳ್ಳೂರ, ರಾಜೇಂದ್ರಕುಮಾರ ಗಂದಗೆ, ಕರುಣಾ ಶೆಟಕಾರ, ಶಕುಂತಲಾ ವಾಲಿ, ಸುರೇಶ ಚನ್ನಶೆಟ್ಟಿ, ಸೋಮಶೇಖರ ಪಾಟೀಲ ಗಾದಗಿ, ಸುರೇಶ ಸ್ವಾಮಿ, ವಿರೂಪಾಕ್ಷ ಗಾದಗಿ, ಪಾಟೀಲ ಖಾಜಾಪುರ, ಶಕುಂತಲಾ ಬೆಲ್ದಾಳೆ ಮತ್ತಿತರರು ಭಾಗವಹಿಸಿದ್ದರು ವಿಶ್ವ ಭಾತೃತ್ವದ ಆಶಯದೊಂದಿಗೆ ಬಸವಣ್ಣ ಈ ನೆಲದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದರು. ಈಗ 900 ವರ್ಷಗಳ ಬಳಿಕ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ರಾಜ್ಯ ಸರ್ಕಾರ ಒಪ್ಪಿಗೆಯ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವುದು ಐತಿಹಾಸಿಕ ಕ್ಷಣ. ಈಗ ಕೇಂದ್ರ ಸಹ ಸಾಂವಿಧಾನಿಕ ಮೊಹರು ಹಾಕಬೇಕಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂದೇಶ ಮುಟ್ಟಿಸಲು ಈ ಮಹಾ ರ್ಯಾಲಿ ಆಯೋಜಿಸಲಾಗಿದೆ. ಇದು ಯಾವುದೇ ಪಕ್ಷದ ವೇದಿಕೆಯಲ್ಲ, ಲಿಂಗಾಯತರ ವೇದಿಕೆ.
  ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ

ಬೈಕ್‌ ನಿಂದ ಲಿಂಗಾಯತ ಶಬ್ದ ರಚನೆ ಮಹಾ ರ್ಯಾಲಿಯಲ್ಲಿ 2018ಕ್ಕೂ ಅಧಿಕ ಬೈಕ್‌ ಗಳನ್ನು ಆಂಗ್ಲ ಭಾಷೆಯಲ್ಲಿ “ಲಿಂಗಾಯತ’ ಶಬ್ದದ ಆಕಾರದಲ್ಲಿ ನಿಲ್ಲಿಸಿದ್ದು ಹಾಗೂ ಮಹಿಳೆಯರು ತಮ್ಮ ಬೈಕ್‌ಗಳೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಎಲ್ಲ ಬಸವಪರ ಸಂಘಟನೆಗಳು ಒಗ್ಗಟ್ಟಾಗಿ ರ್ಯಾಲಿ ನಡೆಸಿದವು.

Advertisement

Udayavani is now on Telegram. Click here to join our channel and stay updated with the latest news.

Next