Advertisement

ರಾಜಧಾನಿ ಉಡ್ತಾ ಬೆಂಗಳೂರು ಆಗಲು ಬಿಡೋಲ್ಲ: ಡಿಸಿಎಂ

12:01 PM Jul 11, 2018 | |

ವಿಧಾನ ಪರಿಷತ್ತು: ಬೆಂಗಳೂರಿಗೆ ಹೊಂದಿಕೊಂಡಿರುವ ದೇವನಹಳ್ಳಿ ಸುತ್ತ ಸಣ್ಣ ಮನೆಗಳಲ್ಲಿ “ಔಷಧ ತಯಾರಿಕಾ ಸಂಸ್ಥೆ’ಯ ಬೋರ್ಡ್‌ ಹಾಕಿಕೊಂಡು ಮಾದಕ ಪದಾರ್ಥಗಳ (ಡ್ರಗ್ಸ್‌, ಗಾಂಜಾ) ಮಿಶ್ರಣ ಹೊಂದಿರುವ ಮಾತ್ರೆಗಳನ್ನು ತಯಾರಿಸುವ ನಕಲಿ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಆಘಾತಕಾರಿ ಅಂಶವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಅಂತಹ ಕಂಪನಿಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿಯೂ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚೆಗೆ ಸುಂಕ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ 5 ಕೋಟಿ ರೂ. ಮೊತ್ತದ ಮಾತ್ರೆಗಳನ್ನು ವಶಪಡಿಸಿಕೊಂಡರು.

ಅವುಗಳನ್ನು ಪರಿಶೀಲಿಸಿದಾಗ ಮಾದಕ ಪದಾರ್ಥಗಳ ಮಿಶ್ರಣ ಹೊಂದಿದ ಮಾತ್ರೆಗಳಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದಾಗ ದೇವನಹಳ್ಳಿ ಸುತ್ತ ಸಣ್ಣ-ಸಣ್ಣ ಮನೆಗಳಲ್ಲಿ “ಔಷಧ ತಯಾರಿಕಾ’ ಸಂಸ್ಥೆಯ ಬೋರ್ಡ್‌ ಹಾಕಿಕೊಂಡು ಮಾದಕ ಪದಾರ್ಥಗಳ (ಡ್ರಗ್ಸ್‌, ಗಾಂಜಾ) ಮಿಶ್ರಣ ಹೊಂದಿರುವ ಮಾತ್ರೆಗಳನ್ನು ತಯಾರಿಸುವ ನಕಲಿ ಕಂಪನಿಗಳು ಇರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಎಂದರು.

ಉಡ್ತಾ ಕರ್ನಾಟಕ ಅಗಲು ಬಿಡುವುದಿಲ್ಲ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್‌, ಗಾಂಜಾ ಸರಬರಾಜು ಮಾಡುವ ದೊಡ್ಡ ವರ್ಗವೇ ಇದೆ. ಜತೆಗೆ ಹೊರದೇಶಗಳಿಂದ ಮಾದಕ ಪದಾರ್ಥಗಳನ್ನು ತಂದು ಮಾರಾಟ ಮಾಡುವ ಜಾಲ ಕೆಲಸ ಮಾಡುತ್ತಿದೆ.

ಈ ಬಗ್ಗೆ ಗೃಹ ಇಲಾಖೆ ಕೈಕಟ್ಟಿ ಕುಳಿತುಕೊಂಡಿಲ್ಲ. ಡ್ರಗ್ಸ್‌ ಮತ್ತು ಗಾಂಜಾ ಮಾರಾಟ ಜಾಲವನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯಾವುದೇ ಕಾರಣಕ್ಕೂ ರಾಜಧಾನಿ ಮತ್ತು ರಾಜ್ಯವನ್ನು “ಉಡ್ತಾ ಬೆಂಗಳೂರು’ ಅಥವಾ “ಉಡ್ತಾ ಕರ್ನಾಟಕ’ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

Advertisement

ಅಗತ್ಯ ಕ್ರಮ: ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ಸಾಗಣೆ ಮತ್ತು ಬಳಕೆ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಸಿಸಿಎಚ್‌-33 ವಿಶೇಷ ನ್ಯಾಯಾಲಯದಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಲಾಗುತ್ತದೆ. ಶಾಲಾ-ಕಾಲೇಜುಗಳ ಸುತ್ತ, ಶಂಕಿತ ಪ್ರದೇಶಗಳಲ್ಲಿ ಪೊಲೀಸರು ಮಫ್ತಿಯಲ್ಲಿ ಇರುತ್ತಾರೆ.

ಬಾತ್ಮೀದಾರರು, ಅಪರಾಧ ವಿಭಾಗದ ಸಿಬ್ಬಂದಿ, ಬೀಟ್‌ ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರತಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದ್ದು, ಈ ಘಟಕ ಮಾದಕ ಪದಾರ್ಥಗಳ ಅಕ್ರಮ ಸಾಗಾಟ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ಡ್ರಗ್ಸ್‌ ಮಾಫಿಯಾ, ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಆಗುವ ಎಲ್ಲ ಅನುಹಾತಗಳಿಗೆ ಸರ್ಕಾರವೇ ಹೊಣೆ ಆಗಲಿದೆ ಎಂದು ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅಂತಾರಾಷ್ಟ್ರೀಯ ಜಾಲ ಇದರ ಹಿಂದೆದೆಯೇ?: ಈ ಜಾಲ ಹಣಕ್ಕಾಗಿ ಕೆಲಸ ಮಾಡುತ್ತಿದ್ದೇಯೇ ಅಥವಾ ನಮ್ಮ ದೇಶದ ಯುವ ಪೀಳಿಗೆಯನ್ನು ಅನಾರೋಗ್ಯಪೀಡಿತರನ್ನಾಗಿ ಮಾಡುವ ಅಘೋಷಿತ ಯುದ್ಧ ಸಾರಿರುವ ಯಾವುದಾದರೂ ಅಂತಾರಾಷ್ಟ್ರೀಯ ಮಟ್ಟದ ಜಾಲ ಇದರ ಹಿಂದೆ ಇದೇಯೇ?

ಏಕೆಂದರೆ ಐಸಿಸ್‌ ಉಗ್ರ ಸಂಘಟನೆ ಈ ರೀತಿಯ ಕೃತ್ಯ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತೇಜಸ್ವಿನಿಗೌಡ ಗಮನ ಸೆಳೆದರು. ಅಂತಹ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಜಾಲ ಇಲ್ಲಿ ಕಾರ್ಯಚರಿಸುತ್ತಿರುವ ಬಗ್ಗೆ ಸದ್ಯ ಮಾಹಿತಿ ಇಲ್ಲ ಎಂದು ಪರಮೇಶ್ವರ ಹೇಳಿದರು. 

56 ಪ್ರಕರಣಗಳು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿವರೆಗೆ 56 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಒಟ್ಟು 2,484 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 182 ಪ್ರಕರಣಗಳ ವಿಲೇವಾರಿಯಾಗಿದ್ದು, 142 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 40 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂದು ಸಚಿವ ಪರಮೇಶ್ವರ್‌ ತಿಳಿಸಿದರು.

ಅನಧಿಕೃತ ಕೇಬಲ್‌ ತೆರವಿಗೆ ಕಠಿಣ ಕ್ರಮ: ವಿಧಾನಪರಿಷತ್ತು: ಬೆಂಗಳೂರಿನ ರಸ್ತೆಗಳಲ್ಲಿ ಅಳವಡಿಸಲಾಗಿರುವ ಅನಧಿಕೃತ ಮತ್ತು ಅಕ್ರಮ ಕೇಬಲ್‌ಗ‌ಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. 

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು, ಬೆಂಗಳೂರಿನ ಹಲವು ಕಡೆ ಹತ್ತಾರು ಕಿ.ಮೀ ಉದ್ದ ಅನಧಿಕೃತ ಕೇಬಲ್‌ಗ‌ಳನ್ನು ಹಾಕಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇವುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದರು. 

ಟೆಲಿಕಾಂ, ಇಂಟರ್‌ನೆಟ್‌ ಸರ್ವಿಸ್‌ ಹಾಗೂ ಇತರೆ ಸೇವಾ ಸಂಸ್ಥೆಗಳು 8,860 ಕಿ.ಮೀ ವಿಸ್ತೀರ್ಣದಷ್ಟು ಕೇಬಲ್‌ ಅಳವಡಿಕೆಗೆ ಬಿಬಿಎಂಪಿ ಅನುಮತಿ ಕೊಟ್ಟಿದ್ದು, ಸಂಸ್ಥೆಗಳಿಂದ 620 ಕೋಟಿ ರೂ. ಶುಲ್ಕ ವಸೂಲು ಮಾಡಿದೆ. ಈ ಮಧ್ಯೆ ಪಾದಚಾರಿಗಳಿಗೆ ತೊಂದರೆ ಆಗುತ್ತಿರುವುದರಿಂದ ಅನಧಿಕೃತ ಕೇಬಲ್‌ಗ‌ಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ದಂಡ ಹೆಚ್ಚಳ: ಅನಧಿಕೃತವಾಗಿ ಕೇಬಲ್‌ ಅಳವಡಿಸಿದ ಸಂಸ್ಥೆಗಳಿಗೆ ವಿಧಿಸುವ ದಂಡವನ್ನು 25 ಲಕ್ಷ ರೂ. ಹಾಗೂ ರಸ್ತೆ ಅಗೆಯುವ ಖಾಸಗಿ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ನಗರದಲ್ಲಿ 11 ಟೆಲಿಕಾಂ, 2 ನಾನ್‌ ಟೆಲಿಕಾಂ ಹಾಗೂ 7 ಇಂಟರ್‌ನೆಟ್‌ ಸೇವೆ ಒದಗಿಸುವ ನೋಂದಾಯಿತ ಗುತ್ತಿಗೆದಾರರು ಇದ್ದಾರೆ. ಅನಧಿಕೃತ ಕೇಬಲ್‌ಗ‌ಳನ್ನು ತೆರವಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಮಾದಕ ಪದಾರ್ಥ ಸಾಗಣೆ ಪ್ರಕರಣದ ಆರೋಪಿಗಳಿಗೆ ಪಂಜಾಬ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಈ ರೀತಿಯ ಕಠಿಣ ಕ್ರಮ ಕೈಗೊಳ್ಳಿ 
-ಲೆಹರ್‌ಸಿಂಗ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next