Advertisement

Bidkalkatte: ಆಡಿಸಿ ನೋಡಿದರೂ ಬೀಳದ ಶಿಲೆ; ಇದೆಂಥಾ ಲೀಲೆ?

12:09 PM Oct 25, 2024 | Team Udayavani |

ಬಿದ್ಕಲ್‌ಕಟ್ಟೆ: ಇಲ್ಲೊಂದು ಬೃಹತ್‌ ಗಾತ್ರದ ವೃತ್ತಾಕಾರದ ಶಿಲೆ ಶತಮಾನಗಳಿಂದಲೂ ಜಾರುವ ಸ್ಥಿತಿಯಲ್ಲೇ ಸ್ಥಿರವಾಗಿ ನಿಂತಿದೆ. ಸಣ್ಣ ಸಣ್ಣ ಕಂಪನಗಳಿಗೇ ಬೆಟ್ಟಗಳು ಉರುಳುವ ಈ ಕಾಲದಲ್ಲಿ ಕಲ್ಲೊಂದು ಯಾವ ಹೆಚ್ಚಿನ ಆಧಾರವಿಲ್ಲದೆ ಗಟ್ಟಿಯಾಗಿ ನಿಂತಿರುವುದು ಅಚ್ಚರಿ ಮತ್ತು ದೈವ ಲೀಲೆ ಎಂದೇ ಜನರು ಪರಿಗಣಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯಿಂದ ಸುಮಾರು 4 ಕಿ.ಮೀ ದೂರದ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲದ ಸಮೀಪ ನೈಸರ್ಗಿಕ ಹಸುರು ಕಾನನದ ನಡುವೆ ಈ ಕಲ್ಲು ನಿಂತಿದೆ.

ಇಲ್ಲಿನ ಪರಿಸರದಲ್ಲಿ ಕಂಬದಂತೆ ಸಾಲು ಸಾಲು ಬೃಹದಾಕಾರದ ಬಂಡೆಗಳು ಆನೆಯ ರೂಪದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಕಂಬಿಕಲ್ಲು ಎನ್ನುವ ಹೆಸರು ಬಂದಿದೆ ಎಂದು ಸ್ಥಳೀಯರಾದ ಕೃಷ್ಣಮೂರ್ತಿ ಆಚಾರ್ಯ ಕಕ್ಕುಂಜೆ ಅವರು ಹೇಳುತ್ತಾರೆ.

ಉದ್ಭವ ಗಣಪತಿಯ ಬೀಡು
ಇಲ್ಲಿನ ಸುತ್ತಮುತ್ತ ಶಿರಿಯಾರದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ, ಪಡುಮುಂಡು ಶ್ರೀ ಮಹಾಗಣಪತಿ ದೇವಸ್ಥಾನ, ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾಗಣಪತಿ ದೇಗುಲ, ಬಿದ್ಕಲ್‌ಕಟ್ಟೆ
ಕೊಳನಕಲ್ಲು ಶ್ರೀ ವಿನಾಯಕ ದೇಗುಲಗಳು ಪ್ರಾಕೃತಿಕ ಸೊಬಗಿನ ನಡುವೆ ನಿಂತಿವೆ.

ಹಿಂದೆ 2 ವೃತ್ತಾಕಾರದ ಶಿಲೆಗಳಿದ್ದವು
ಪುರಾಣ ಪ್ರಸಿದ್ಧ ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾ ಗಣಪತಿ ದೇಗುಲಕ್ಕೂ ಈ ಶಿಲೆಗೆ ಅವಿನಾಭಾವ ಸಂಬಂಧಗಳಿವೆ. ದೇಗುಲಕ್ಕೆ ಆಗಮಿಸುವ ಭಕ್ತರು ಪ್ರಕೃತಿಯಲ್ಲಿ ಬೆರೆತಿರುವ ವಿಸ್ಮಯಕಾರಿ ಈ ಶಿಲೆಗೆ ನಮಿಸುತ್ತಾರೆ. ಹಿಂದೆ ಈ ಬೃಹದಾಕಾರದ ಬಂಡೆಯ ಮೇಲೆ 2 ವೃತ್ತಾಕಾರದ ಶಿಲೆಗಳಿದ್ದವು. ಯಾರೋ ಒಬ್ಬರು ಹಣದ ಆಸೆಗಾಗಿ ಒಂದು ಶಿಲೆಯನ್ನು ಒಡೆದು ಗಣಿಗಾರಿಕೆಗೆ ಮುಂದಾಗಿದ್ದರು. ಆಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಹೀಗಾಗಿ ಗಣಿಗಾರಿಕೆ ನಿಲ್ಲಿಸಲಾಯಿತು ಎನ್ನಲಾಗುತ್ತಿದೆ.

Advertisement

ಗಣಿಗಾರಿಕೆ ನಿಂತಿದೆ…
ಶತಮಾನಗಳ ಹಿಂದೆ ಬೃಹದಾಕಾರದ ಬಂಡೆಯ ಮೇಲೆ ದೇವರ ಕಣ್ಣಿನ ಗುಡ್ಡೆಯಂತಿದ್ದ ಎರಡು ಬಂಡೆಗಳಿದ್ದವು. ಇವುಗಳಲ್ಲಿ ಒಂದನ್ನು ಒಡೆಯಲು ಯತ್ನಿಸಿದಾಗ ಸಮಸ್ಯೆಗಳು ಕಾಣಿಸಿದವಂತೆ. ಹೀಗಾಗಿ ಆ ದಿನಗಳಿಂದ ಈ ದೇಗುಲದ ಸುತ್ತಮುತ್ತಲಿನ ಪರಿಸರದಲ್ಲಿ ಶಿಲೆಕಲ್ಲು ಗಣಿಗಾರಿಕೆ ಸಂಪೂರ್ಣ ನಿಂತಿದೆ. ಜಾರುವ ಸ್ಥಿತಿಯಲ್ಲಿರುವ ಈ ಶಿಲೆ ಯಾವುದೇ ಕಾಲದ ಹೊಡೆತಕ್ಕೆ ಜಗ್ಗದೇ ಸ್ಥಿರವಾಗಿ ನಿಂತಿರುವುದು ವಿಶೇಷ.
-ವೇ|ಮೂ| ಶ್ರೀಪತಿ ಭಟ್‌ ಕಕ್ಕುಂಜೆ, ಪ್ರಧಾನ ಅರ್ಚಕರು, ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲ

-ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next