ಬೀದರ್ : ಲಂಡನ್ ಯೂತ್ ಕೌನ್ಸಿಲ್ ನ ಮೊದಲ ಭಾರತೀಯ ಸದಸ್ಯ, ಬೀದರನ ಅದಿಶ್ ರಜಿನಿಶ್ ವಾಲಿ ಅವರು ಯುಕೆ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ‘ಇವನಾರವ ಇವನಾರವ’ ವಚನ ಪಠಿಸುವ ಮೂಲಕ ಕನ್ನಡ ಡಿಂಡಿಮ ಬಾರಿಸಿದ್ದಾರೆ.
ಇಲ್ಲಿನ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರ ಮೊಮ್ಮಗ ಆದೀಶ್, ಸಿಟಿ ಯೂನಿರ್ವಸಿಟಿ ಆಫ್ ಲಂಡನ್ ನ ಬೇಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಿಂದ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಕಳೆದ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಬಾವುಟ ಹಾರಿಸಿ ಪದವಿಯನ್ನು ಸ್ವೀಕರಿಸಿ ಗಮನ ಸೆಳೆದಿದ್ದರು. ಈಗ ಮತ್ತೆ ಯುಕೆ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಲಂಡನ್ ಸಂಸತ್ತಿನಲ್ಲಿ ತಮ್ಮ ಪ್ರಥಮ ಭಾಷಣದಲ್ಲಿ ವಚನ ಪಠಣದೊಂದಿಗೆ ಭಾಷಣ ಆರಂಭಿಸಿದ ಆದೀಶ್, ‘ಹವಾಮಾನ ವಲಸೆ – ಯುಕೆ ಸರ್ಕಾರದ ನೀತಿ” ಎಂಬ ವಿಷಯದ ಮೇಲೆ ವಿಷಯ ಮಂಡಿಸಿದ್ದಾರೆ.
ಲಂಡನ್ ಯುವ ಸಮಿತಿಯಲ್ಲಿರುವ ಆದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಯುನೈಟೆಡ್ ಕಿಂಗ್ಡಮ್ ಗೌರವಯುತ ಯುವ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.