Advertisement

ಅಗತ್ಯ ವಸ್ತು ಪೂರೈಕೆ: ಪರಿಶೀಲನಾ ಸಭೆ

01:10 PM Apr 20, 2020 | Naveen |

ಬೀದರ: ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಕಿರಾಣಿ, ತರಕಾರಿ, ಹಾಲು ಮತ್ತು ಹಣ್ಣು ಸೇರಿದಂತೆ ಅಗತ್ಯ ವಸ್ತುಗಳನ್ನು ಸಮರ್ಪಕ ಪೂರೈಕೆ ಮಾಡುವುದರ ಕುರಿತು ರಚಿಸಿರುವ ತಂಡಗಳ ಕಾರ್ಯವೈಖರಿ ಬಗ್ಗೆ ಪರಿಶೀಲಿಸಲು ಸಹಾಯಕ ಆಯುಕ್ತ ಅಕ್ಷಯ ಶ್ರೀಧರ ಅಧ್ಯಕ್ಷತೆಯಲ್ಲಿ ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.

Advertisement

ಈ ವೇಳೆ ಮಾತನಾಡಿದ ಆಯುಕ್ತರು, ಒಂದರಿಂದ 15, 25 ಮತ್ತು 32 ಸೇರಿದಂತೆ ಒಟ್ಟು 17 ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಅಗತ್ಯ ವಸ್ತುಗಳ ಸರಬರಾಜಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ತಂಡಕ್ಕೆ ಸಹಾಯಕ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕೆಲವು ವಾರ್ಡ್‌ಗಳಲ್ಲಿ ಹಾಲು, ಕಿರಾಣಿ, ತರಕಾರಿ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಇದು ಕೊನೆಯಾಗಬೇಕು. ತಂಡದಲ್ಲಿರುವ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಜನರಿಗೆ ಇರುವ ಜೀವನಾವಶ್ಯಕ ಸಾಮಗ್ರಿಗಳನ್ನು ಅವರ ಮನೆಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಬಸಪ್ಪ ಅವರು ತಂಡದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಜನರ ಬೇಡಿಕೆಯಂತೆ ಕೇಬಲ್‌ ಟಿವಿ ದುರಸ್ತಿ ಮತ್ತು ಸಂಪರ್ಕ ನೀಡುವವರಿಗೆ ಕೂಡ ಪಾಸುಗಳನ್ನು ನೀಡಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಇದೇ ವೇಳೆ ಕೆಲವರು ಸಹಾಯಕ ಆಯುಕ್ತರಲ್ಲಿ ಕೋರಿದರು. ನಾಡ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್‌ ವೃತ್ತ ನಿರೀಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next