ಬೀದರ: ಹಾಸಿಗೆ ಹಿಡಿದಿರುವ ಇಬ್ಬರು ಬುದ್ಧಿಮಾಂದ್ಯ ಹೆಣ್ಮಕ್ಕಳು, ಇವರ ಪೋಷಣೆ ಮಾಡುತ್ತಿದ್ದ ಮಡದಿಯೂ ಸಾವು. ಲಾಕ್‌ಡೌನ್ ದಿಂದ ಕೆಲಸಕ್ಕೂ ಹೋಗಲು ಸಾಧ್ಯವಾಗದೇ ಮನೆಯಲ್ಲೇ ಬಂಧಿಯಾದ ಅನಾರೋಗ್ಯ ಪೀಡಿತ ತಂದೆ, ಒಂದು ಹೊತ್ತಿನ ಊಟ ಮತ್ತು ಔಷಧಿಗೂ ತೀವ್ರ ಪರದಾಟ!
ನಗರದ ಓಲ್ಡ್ ಸಿಟಿಯ ಚೊಂಡಿ ಗಲ್ಲಿಯ ವಿಜಯಕುಮಾರ ರಂಗದಾಳೆ ಕುಟುಂಬದ ಕಣ್ಣೀರಿನ ಕಥೆ ಇದು. ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕು ಗಡಿ ಜಿಲ್ಲೆ ಬೀದರಗೂ ವ್ಯಾಪಿಸಿ ಆತಂಕವನ್ನು ತಂದೊಡ್ಡಿದೆ. ಈ ಮಹಾಮಾರಿ ವೈರಸ್ ಸಂಕಷ್ಟ ಒಬ್ಬರಿಗೆ ಒಂದೊಂದು ರೀತಿಯಲ್ಲಿ ಬಾಧಿಸುತ್ತಿದ್ದು, ರಂಗದಾಳೆ ಕುಟುಂಬವನ್ನು ಅಕ್ಷರಶಃ ಕಣ್ಣೀರಲ್ಲಿ ದಿನ ಕಳೆಯುವಂತಾಗಿದೆ. ಸದ್ಯ ಆರು ಕೊರೊನಾ ಸೋಂಕಿತರುಳ್ಳ ಬೀದರ ಜಿಲ್ಲೆ ಆರೆಂಜ್ ಝೋನ್‌ನಲ್ಲಿದೆ. ಎಲ್ಲ ಸೋಂಕಿತರು ನೆಲೆಸಿರುವ “ಓಲ್ಡ್ ಸಿಟಿ’ಯನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿ ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಿದೆ. ಪರವಾನಗಿ ಇಲ್ಲದೇ ಯಾರೊಬ್ಬರು ಆ ಪ್ರದೇಶದಿಂದ ಹೊರಗೆ ಹೋಗುವಂತಿಲ್ಲ, ಒಳಗೆ ಪ್ರವೇಶಿಸುವಂತಿಲ್ಲ. ಈ ಓಲ್ಡ್‌ಸಿಟಿಯ ಚೊಂಡಿ ಗಲ್ಲಿಯ ನಿವಾಸಿಯಾಗಿರುವ ವಿಜಯಕುಮಾರ ತನ್ನಿಬ್ಬರು ವಿಕಲಚೇತನ ಮಕ್ಕಳೊಂದಿಗೆ ಸೀಲ್ ಡೌನ್ ಆಗಿದ್ದಾರೆ. ಮನೆಯಿಂದ ಹೊರಗೆ ಬರಲಾಗದೇ ತುತ್ತು ಅನ್ನ, ಔಷಧಗಾಗಿ ಪರಿತಪಿಸುತ್ತಿದ್ದಾರೆ.
ವೃತ್ತಿಯಲ್ಲಿ ಲೇಡಿಸ್ ಟೇಲರ್ ಆಗಿರುವ ವಿಜಯಕುಮಾರ 30 ವರ್ಷದ ಇಬ್ಬರು ದೇವಿಕಾ ಮತ್ತು ಪ್ರಿಯಂಕಾ ಇಬ್ಬರು ಮಕ್ಕಳ ಪಾಲನೆ- ಪೋಷಣೆ ಮಾಡುತ್ತ ಬದುಕು ಸಾಗಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸಾವು ರಂಗದಾಳೆಗೆ ಬರಸಿಡಿಲಿನಂತೆ ಅಪ್ಪಳಿಸಿದ್ದರೆ ಈಗ ಕೊರೊನಾ ಮತ್ತಷ್ಟು ಬರೆ ಎಳೆದಿದೆ. ಇಷ್ಟು ವರ್ಷಗಳ ಕಾಲ ಕಾಡದ ನೋವು ಈಗ ಅವರನ್ನು ಜರ್ಜರಿತ ಮಾಡಿದೆ. ಇಬ್ಬರು ಮಕ್ಕಳಿಗೆ ಕಿವಿ ಕೇಳಿಸಲ್ಲ, ಮಾತು ಬರುವುದಿಲ್ಲ. ಜತೆಗೆ ಕೈ ಕಾಲಿನಲ್ಲಿ ಸ್ವಾ ಧೀನ ಇಲ್ಲದೇ ಹಾಸಿಗೆಯಲ್ಲೇ ಇರುತ್ತಾರೆ. ಪತ್ನಿ ಸಾವು ಬಳಿಕ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅಪ್ಪನ ಹೆಗಲ ಮೇಲಿದೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಔಷಧೋಪಚಾರದ ಖರ್ಚಿದೆ. ಆದರೆ, ಇತ್ತ ಲಾಕ್‌ಡೌನ್‌ದಿಂದ ಕೈಯಲ್ಲಿ ಕೆಲಸ ಇಲ್ಲದೇ ಹಣಕ್ಕಾಗಿ ಪರದಾಟ ನಿಲ್ಲುತ್ತಿಲ್ಲ. ಇನ್ನೊಂದೆಡೆ ಮಕ್ಕಳಿಗೆ ಬರುತ್ತಿದ್ದ ಮಾಸಾಶನ ನಾಲ್ಕು ತಿಂಗಳಿಂದ ನಿಂತಿದೆ. ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಕೂಡಲೇ ಲಾಕ್‌ಡೌನ್ ವಿಧಿಯಾಟದಿಂದ ಕಷ್ಟಕ್ಕೆ ಒಳಗಾಗಿರುವ ವಿಜಯಕುಮಾರ ರಂಗದಾಳೆ ಕುಟುಂಬದ ನೆರವಿಗೆ ಧಾವಿಸಬೇಕಿದೆ. ವಿಜಯಕುಮಾರ ಮೊಬೈಲ್ ನಂ.9141835010 ಸಂಪರ್ಕಿಸಬಹುದು.
ಲಾಕ್‌ಡೌನ್‌ದಿಂದ ಕೆಲಸ, ಆದಾಯ ಇಲ್ಲದೇ ವಿಕಲಚೇತನ ಮಕ್ಕಳ ಪೋಷಣೆ ಮಾಡುವುದು ಕಷ್ಟವಾಗುತ್ತಿದೆ. ಅನ್ನವನ್ನು ಯಾರದಾದರೂ ಕೈಕಾಲು ಹಿಡಿದು ಬೇಡಿಕೊಂಡು ತಿನ್ನಬಹುದು. ಆದರೆ, ಅನಾರೋಗ್ಯ ಪೀಡಿತ ನನಗೆ ಮತ್ತು ಮಕ್ಕಳಿಗೆ ಔಷಧಕ್ಕೆ ಪರದಾಟ ಇದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹೋದರೇ ಮಾತ್ರ ಈ ಔಷಧ ಕೊಡುತ್ತಾರೆ. ಆದರೆ, ಕಂಟೈನ್ಮೆಂಟ್ ಝೋನ್‌ನಿಂದ ಹೊರಗೆ ಹೋಗಲು ನನ್ನ ಬಳಿ ಪಾಸ್ ಇಲ್ಲ. ಜಿಲ್ಲಾಡಳಿತ ಅಗತ್ಯ ಅವಕಾಶ ಮಾಡಿಕೊಡಬೇಕು.
ವಿಜಯಕುಮಾರ ರಂಗದಾಳೆ, ಬೀದರ
ಶಶಿಕಾಂತ ಬಂಬುಳಗೆ