Advertisement

ಹೋಂ ಕ್ವಾರಂಟೈನ್‌ ವ್ಯವಸ್ಥೆಗೆ ಸೂಚನೆ

12:40 PM May 30, 2020 | Naveen |

ಬೀದರ: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ, ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಪೂರೈಸಿದವರಿಗೆ ಮತ್ತು ಸ್ಯಾಂಪಲ್‌ ನೀಡಿದ ಎಲ್ಲರಿಗೂ ಬಿಡುಗಡೆ ಮಾಡಿ ಅವರಿಗೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಹೋಂ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಬೇಕು ಎಂದು ಡಿಸಿ ಡಾ.ಎಚ್‌.ಆರ್‌.ಮಹಾದೇವ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಸ್ಯಾಂಪಲ್‌ ನೀಡದೇ ಇರುವವರನ್ನು ಮತ್ತು ಕಡ್ಡಾಯ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಪೂರೈಸದೇ ಇರುವವರನ್ನು ಬಿಡುಗಡೆ ಮಾಡಬಾರದು ಎಂದು ಇದೆ ವೇಳೆ ಸ್ಪಷ್ಟಪಡಿಸಿದರು. ಜಿಲ್ಲೆಯ ವಿವಿಧ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಈಗ ಸಾವಿರಾರು ಸಂಖ್ಯೆಯಲ್ಲಿ ಹೊರ ರಾಜ್ಯಗಳ ಜನರು ಸಾಂಸ್ಥಿಕ ಕ್ವಾರಂಟೈನ್‌ದಲ್ಲಿದ್ದಾರೆ. ನಮ್ಮನ್ನು ಬೇಗ ಬಿಡುಗಡೆ ಮಾಡಿ ಎಂಬುದು ಅಲ್ಲಿನ ಕೆಲವರ ಒತ್ತಾಯ ಕೂಡ ಆಗಿದೆ. ಸರ್ಕಾರ ಮಾರ್ಗಸೂಚಿ ಅನುಸಾರ ಈಗ ಹೋಂ ಕ್ವಾರಂಟೈನ್‌ ಹೋಗುವವರ ಮೇಲೆ ತಹಶೀಲ್ದಾರರು, ತಾಪಂ ಇಒಗಳು, ತಾಪಂ ಆರೋಗ್ಯಾಧಿಕಾರಿಗಳು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ನಿಗಾ ಇಡಬೇಕು ಎಂದು ಸೂಚಿಸಿದರು.

ಹೋಂ ಕ್ವಾರಂಟೈನ್‌ಗೆ ಹೋಗುವವರಿಗೆ ಅವರ ಕೈ ಮೇಲೆ ಅಳಿಸಿ ಹೋಗದ ಹಾಗೆ ಕಡ್ಡಾಯ ಸೀಲ್‌ ಹಾಕಬೇಕು. ಅವರ ದಾಖಲೆಗಳನ್ನಿಟ್ಟುಕೊಳ್ಳಬೇಕು. ಹೋಂ ಕ್ವಾರಂಟೈನ್‌ದಲ್ಲಿರುವಾಗ ಹೇಗೆ ನಡೆದುಕೊಳ್ಳಬೇಕು ಎನ್ನುವ ಮಾಹಿತಿಯ ಕರಪತ್ರ ನೀಡಬೇಕು. ಅವರ ಮನೆಯಲ್ಲಿದೆ ಎಂಬುದನ್ನು ಖಾತರಿ ಮಾಡಿಕೊಂಡು ಹೋಂ ಕ್ವಾರಂಟೈನದಲ್ಲಿದ್ದಾರೆ ಎನ್ನುವ ಸ್ಟೀಕರ್‌ ನ್ನು ಅಂಟಿಸಲು ಕ್ರಮವಹಿಸಬೇಕು. ಹೋಂ ಕ್ವಾರಂಟೈನ್‌ಗೆ ಹೋಗುವವರ ಮೇಲೆ ಒಂದು ವಾರ ಕಾಲ ನಿಗಾ ಇಡಬೇಕು. ಅವರು ಎಲ್ಲಿಯೂ ಅಡ್ಡಾಡದ ಹಾಗೆ ನೋಡಿಕೊಳ್ಳಬೇಕು. ಹೋಂ ಕ್ವಾರಂಟೈನ್‌ ಮಾಡಿದ ನಂತರ ಅವರ ವಿವರವನ್ನು ಹೋಂ ಕ್ವಾರಂಟೈನ್‌ ಆ್ಯಪ್‌ನಲ್ಲಿ ಅಪಡೇಟ್‌ ಮಾಡಬೇಕು ಎಂದರು.

ಇದುವರೆಗೆ ಬಾಕಿ ಉಳಿದವರ ಸ್ಯಾಂಪಲ್‌ಗ‌ಳನ್ನು ಕೂಡ ಬೇಗ ಪಡೆದುಕೊಂಡು ಅವರನ್ನು ಕೂಡ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದರು. ನಮ್ಮ ವರದಿ ಬಂದ ಬಳಿಕವೇ ನಾವು ಹೋಂ ಕ್ವಾರಂಟೈನ್‌ಗೆ ಹೋಗುತ್ತೇವೆ ಎಂದು ಯಾರಾದರು ತಿಳಿಸಿದಲ್ಲಿ ಅವರಿಗೆ ಇನ್ನಷ್ಟು ದಿನ ಸಾಂಸ್ಥಿಕ ಕ್ವಾರಂಟೈನ್‌ ದಲ್ಲಿಯೇ ಮುಂದುವರಿಸಲು ಅವಕಾಶ ನೀಡಬೇಕು ಎಂದರು.  ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್‌.ನಾಗೇಶ, ಅಪರ ಡಿಸಿ ರುದ್ರೇಶ ಗಾಳಿ, ಎಸಿ ಅಕ್ಷಯ್‌ ಶ್ರೀಧರ್‌, ಡಿಎಚ್‌ಒ ಡಾ.ವಿ.ಜಿ.ರೆಡ್ಡಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next