ಶಶಿಕಾಂತ ಬಂಬುಳಗೆ
ಬೀದರ: ಹಸಿದ, ಬಡವರಿಗೆ ಅನ್ನ, ಆಶ್ರಯ ನೀಡಬೇಕು ಎನ್ನುವುದು ಸಿಖ್ ಧರ್ಮದ ತಿರುಳು. ಅದಕ್ಕಾಗಿಯೇ ಸಿಖ್ಖರ ಶ್ರದ್ಧಾ ಕೇಂದ್ರ ಬೀದರನ ಗುರುದ್ವಾರದಲ್ಲಿ “ಲಂಗರ್’ (ಅನ್ನ ದಾಸೋಹ) ಯಾವಾಗಲೂ ಪ್ರಧಾನವಾಗಿದೆ. ಕೇವಲ ದಾನಿಗಳ ಧನ ಸಹಾಯ ಮತ್ತು ಸ್ವಯಂ ಸೇವಕರ ಶ್ರಮದಿಂದಲೇ ಈ ದಾಸೋಹ ನಡೆಯುತ್ತಿರುವುದು ವಿಶೇಷ.
ಪವಿತ್ರ ತಾಣ ಗುರುದ್ವಾರದಲ್ಲಿ ಗುರುನಾನಕರ ಸ್ವರ್ಣ ಮಂದಿರ ಭಕ್ತರನ್ನು ಆಕರ್ಷಿಸಿದರೆ, ಪಕ್ಕದ “ಲಂಗರ್’ನ ವ್ಯವಸ್ಥೆ ಮೂಕ ವಿಸ್ಮಯವಾಗಿಸುತ್ತದೆ. ಅಡುಗೆ ತಯಾರಿ, ಊಟ ಬಡಿಸುವುದು, ತಟ್ಟೆ ತೊಳೆಯುವುದು ಸೇರಿ ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂ ಸೇವಕರೇ ಮಾಡುವುದು ಲಂಗರ್‌ನ ವಿಶೇಷ. ಅಷ್ಟೇ ಅಲ್ಲ ಊಟ ಮಾಡಿದ ತಟ್ಟೆಯನ್ನು ಸ್ವತ್ಛ ಮಾಡಲು ಹತ್ತಾರು ಕೈಗಳು ಚಾಚುತ್ತವೆ. ಇಲ್ಲಿನ ಸ್ವಯಂ ಸೇವಕರೆಲ್ಲರೂ ಒಂದೇ. ಬಡವ, ಶ್ರೀಮಂತನೆಂಬ ಭೇದವಿಲ್ಲದೇ ಎಲ್ಲರೂ ನಿಷ್ಕಲ್ಮಶ ಮನಸ್ಸು, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ.
ಲಂಗರ್‌ನ ಇನ್ನೊಂದು ವಿಶಿಷ್ಟತೆ ಎಂದರೆ ಶಿಸ್ತು. ಶುಚಿ ಮತ್ತು ರುಚಿಯಾದ ಭೋಜನಕ್ಕೆ ಆದ್ಯತೆ. ವೈಯಕ್ತಿಕ ಜೀವನದಲ್ಲಿ ದೊಡ್ಡ ಹುದ್ದೆಯಲ್ಲಿರಲಿ, ಬಡವನಿರಲಿ ಎಲ್ಲರೂ ಹಾಸಿದ್ದ ಚಾಪೆ ಮೇಲೆ ಸಾಲಾಗಿ ಕುಳಿತು ಊಟ ಸೇವಿಸಬೇಕು. ಪ್ರತಿಯೊಬ್ಬರು ತಲೆಯನ್ನು ಕರವಸ್ತ್ರ ಅಥವಾ ಸೆರಗಿನಿಂದ ಮುಚ್ಚಬೇಕು ಎಂಬ ನಿಯಮಗಳಿವೆ. ರೋಟಿ, ಅನ್ನ, ಬೇಳೆ ಸಾರು, ಪಲ್ಯ ಮತ್ತು ಸಿಹಿ ಪದಾರ್ಥ ನಿತ್ಯದ ಊಟ. ಪ್ರತಿ ನಿತ್ಯ 24 ಗಂಟೆಯೂ ಲಂಗರ್ ನಡೆಯುತ್ತದೆ. ಯಾವುದೇ ಜಾತಿ, ಮತದ ಬೇಧ ಭಾವ ಇಲ್ಲಿಲ್ಲ. ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಸೇವಿಸುತ್ತಾರೆ.
ಅಡುಗೆ ತಯಾರಿಕೆ ಹಾಲ್‌ನಲ್ಲಿ ಪ್ರಸಾದ ತಯಾರಿಸಲು ಸ್ವಯಂ ಸೇವಕರ ಪಡೆ ಸಜ್ಜಾಗಿರುತ್ತದೆ. ತರಕಾರಿ, ಬೇಳೆ ಸ್ವಚ್ಛ ಮಾಡುವುದು, ಗಿರಣಿಯಲ್ಲಿ ಹಿಟ್ಟು ಬೀಸುವುದು, ಅಡುಗೆ ಸಿದ್ಧಪಡಿಸುವ ಸೇವೆ ಮಾಡುವ ಮೂಲಕ ಆನಂದ ಪಡೆಯುತ್ತಾರೆ. ನಾನಕರ ಗುರುವಾಣಿಯನ್ನು ಹಾಡುತ್ತ ಆಹಾರ ತಯಾರಿಸುತ್ತಾರೆ. ಇದಕ್ಕಾಗಿ ಆಧುನಿಕ ಯಂತ್ರಗಳನ್ನು ಬಳಕೆ ಮಾಡುತ್ತಾರೆ. ಬೀದರನ ಗುರುದ್ವಾರದಲ್ಲಿ ಗುರು ನಾನಕ್ ಮಹಾರಾಜರ 550ನೇ ಜನ್ಮ ಶತಾಬ್ಧಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಮೂರು ದಿನಗಳ ಕಾಲ ಲಕ್ಷಾಂತರ ಸಿಖ್ ಬಾಂಧವರು ದೇಶ- ವಿದೇಶಗಳಿಂದ ಆಗಮಿಸಲಿದ್ದಾರೆ. ಹಾಗಾಗಿ ನಿತ್ಯದ ಲಂಗರ್ ಜತೆಗೆ ಗುರುದ್ವಾರ ಪರಿಸರದಲ್ಲಿ ನಾಲ್ಕು ಕಡೆ ಪ್ರತ್ಯೇಕ ಲಂಗರ್‌ಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರೋಟಿ, ತಂದೂರಿ, ವಿವಿಧ ಬಗೆಯ ತರಕಾರಿ ಪಲ್ಯ, ಸಿಹಿ ಪದಾರ್ಥ ಸೇರಿ ಸುಮಾರು 36 ಬಗೆ ಭೋಜನ ಸಿದ್ಧಪಡಿಸಲಾಗುತ್ತಿದೆ. ಅಡುಗೆ ತಯಾರಿಸಲು ಮತ್ತು ಬಡಿಸಲು ಸುಮಾರು 400 ಜನರು ನಾಂದೇಡ್, ಪಂಜಾಬ್‌ನ ಕರ ಸೇವಕರು ಸನ್ನದ್ಧರಿದ್ದಾರೆ.
ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಗುರುನಾನಕರ ಪ್ರಧಾನ ಸಂದೇಶ. ಇಲ್ಲಿನ ಗುರುದ್ವಾರ ಲಂಗರ್‌ನಲ್ಲಿ ದಿನದ 24 ಗಂಟೆಯೂ ಪ್ರಸಾದ ವ್ಯವಸ್ಥೆ ಲಭ್ಯ ಇರುತ್ತದೆ. ನಿತ್ಯ 2 ಸಾವಿರಕ್ಕೂ ಹೆಚ್ಚು ಜನ ಊಟ ಸೇವಿಸುತ್ತಾರೆ. ಸಿಬ್ಬಂದಿಗಳಿಗಿಂತ ಸ್ವಯಂ ಸೇವಕರೇ ಹೆಚ್ಚು ಕೆಲಸ ಮಾಡುತ್ತಾರೆ. ನಾನಕರ ಜನ್ಮ ಶತಾಬ್ಧಿ ನಿಮಿತ್ತ ನಾಲ್ಕು ಹೆಚ್ಚುವರಿ ಲಂಗರ್ ಸ್ಥಾಪಿಸಲಾಗಿದ್ದು, ನಿತ್ಯ 50 ಸಾವಿರ ಜನ ಭೇಟಿ ನೀಡಲಿದ್ದಾರೆ.
ಜ್ಞಾನಿ ದರ್ಬಾರಸಿಂಗ್,
ವ್ಯವಸ್ಥಾಪಕರು, ಗುರುದ್ವಾರ ಬೀದರ