Advertisement

ಸೋಂಕಿತರ ಶವಕ್ಕೆ “ಬಿಲಾಲ್‌’ಮುಕ್ತಿದಾತ

06:46 PM Jul 09, 2020 | Naveen |

ಬೀದರ: ಹೆಮ್ಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ದಿನಕ್ಕೊಂದು ಯಡವಟ್ಟಾಗುತ್ತಿರುವುದು ಒಂದೆಡೆಯಾದರೆ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಸ್ವತಃ ಕುಟುಂಬದವರೇ ಹೆದರುತ್ತಿರುವುದು ಸಾಮಾನ್ಯವಾಗಿದೆ.

Advertisement

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಿಸಿಲೂರಿನ ಸಮಾಜಮುಖೀ ಕಾರ್ಯಕರ್ತರ ತಂಡ ಸೋಂಕಿತರು, ಅನಾಥರ ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಕೊರೊನಾ ದೇಶದೆಲ್ಲೆಡೆ ಜನರ ಜೀವ ಹಿಂಡುತ್ತ ತಲ್ಲಣ ಮೂಡಿಸುತ್ತಿದ್ದು ಬೀದರ್‌ ಸಹ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆಯಲ್ಲದೆ ಇದರಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಭೀತಿ ಮಧ್ಯೆಯೇ ಬೀದರನ ಮಹ್ಮದ್‌ ಮಜೀದ್‌ ಬಿಲಾಲ್‌ ಮತ್ತು ಯುವಕರ ತಂಡ ಮಾನವೀಯತೆ ನೆಲೆಯಲ್ಲಿ ಕೋವಿಡ್‌-19 ರೋಗಕ್ಕೆ ಬಲಿಯಾಗಿರುವ, ಅಪರಿಚಿತರ ಶವಗಳನ್ನು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದೆ. ಆರೋಗ್ಯ ಇಲಾಖೆ, ನಗರಸಭೆ ಪರವಾನಿಗೆ ಪಡೆದು ಈವರೆಗೆ ಸೋಂಕಿನಿಂದ ಮೃತಪಟ್ಟ ಮೂವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬೀದರ ಹೊರವಲಯದ ಚಿದ್ರಿಯ ಹೈದರ್‌ ಕಾಲೋನಿಯ ನಿವಾಸಿ ಮಹಮದ್‌ ಮಜೀದ್‌ ಬಿಲಾಲ್‌ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಸಂಘಟನೆ ಮೂಲಕ ಸಾಮಾಜಿಕ ಸೇವೆಗೈಯುತ್ತ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಗರ ಸೇರಿ ಜಿಲ್ಲೆಯಲ್ಲಿ ಅಪಘಾತ, ಬಾವಿ, ಹೊಳೆ, ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಅನಾಥ ಮೃತದೇಹ ಪತ್ತೆಯಾದರೂ ಆ ಸ್ಥಳಕ್ಕೆ ಹಾಜರಾಗಿ ಆ ದೇಹಕ್ಕೆ ಮುಕ್ತಿ ನೀಡುತ್ತ ಬಂದಿದ್ದಾರೆ. ಈ ವರೆಗೆ ಹತ್ತಾರು ಅನಾಥ ಶವಗಳ ಅಂತ್ಯಕ್ರಿಯೆ ಮಾಡಿರುವ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಬಿಲಾಲ್‌ ಅವರ ತಂಡ ಈಗ ಕೊರೊನಾದಿಂದ ಸಾವಿಗೀಡಾದವರ ಸಂಸ್ಕಾರ ಮಾಡಲು ಮುಂದಾಗಿದೆ.

ಹದಿನೈದು ದಿನಗಳ ಹಿಂದೆಯಷ್ಟೇ ಡಿಎಚ್‌ಒ ಡಾ| ವಿ.ಜಿ. ರೆಡ್ಡಿಯವರಿಗೆ ಮನವಿ ನೀಡಿ ಪರವಾನಿಗೆ ಪಡೆದಿರುವ ತಂಡ ಮೂವರು ಸೋಂಕಿತರ ಶವ ಸಂಸ್ಕಾರ ಮಾಡಿದೆ. ಆರೋಗ್ಯ ಇಲಾಖೆ ಬಿಲಾಲ್‌ ಅವರನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಿದೆ. ಪಿಪಿಇ ಕಿಟ್‌ ಧರಿಸಿ, ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ ಹಾಕಿಕೊಂಡು ಮುಂಜಾಗ್ರತಾ ಕ್ರಮಗಳೊಂದಿಗೆ ಮೃತರ ಸಂಪ್ರದಾಯದಂತೆ ಅಂತಿಮ ಕ್ರಿಯೆಗಳನ್ನು ಮಾಡಲಾಗಿದೆ. ಇವರ ಸೇವೆಗೆ ಬ್ರಿಮ್ಸ್‌, ನಗರಸಭೆ ಸಹಕಾರ ನೀಡುತ್ತಿದೆ. ಅನಾಥರ ಶವ ಸಂಸ್ಕಾರಕ್ಕಾಗಿ ಮಜೀದ್‌ ಬಿಲಾಲ್‌ (ಮೊ. 8746999222) ಅವರನ್ನು ಸಂಪರ್ಕಿಸಬಹುದು. ಅವರ ತಂಡ ಸಂಬಂಧಪಟ್ಟವರ ಪರವಾನಿಗೆ ಪಡೆದು ಅಂತಿಮ ಕ್ರಿಯೆ ನಡೆಸಿಕೊಡಲಿದೆ.

ಅನಾಥ ಗೆಳೆಯನೊಬ್ಬನ ಶವ ಸಂಸ್ಕಾರದ ಘಟನೆ ನನ್ನನ್ನು ಈ ಸಮಾಜಮುಖೀ ಕಾರ್ಯದಲ್ಲಿ ತೊಡಿಗಿಸಿಕೊಳ್ಳುವಂತೆ ಮಾಡಿತು. ಸಮಾಜ ಸೇವೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥಾಪಕ ಹುದ್ದೆಯನ್ನು ಬಿಟ್ಟಿದ್ದೇನೆ. ಕಳೆದ ಐದು ವರ್ಷದಲ್ಲಿ ಹತ್ತಾರು ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಈಗ ಮುಂಜಾಗ್ರತಾ ಕ್ರಮದೊಂದಿಗೆ ಬೀದರನ ಮೂರು ಕೊರೊನಾ ಸೋಂಕಿತರ ಶವಕ್ಕೆ ಮುಕ್ತಿ ನೀಡಿದ್ದೇವೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಬೇರೆಡೆಗೆ ವಾಸವಾಗಿದ್ದೇನೆ.
ಮಜೀದ್‌ ಬಿಲಾಲ್‌

Advertisement

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next