ಬೀದರ: ಕೊರೊನಾ ವೈರಸ್ ಗಡಿ ಜಿಲ್ಲೆಗೂ ತನ್ನ ಕಬಂಧ ಬಾಹು ಈಗಾಗಲೇ ಚಾಚಿದ್ದು, ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಲಾಕ್‌ಡೌನ್‌ಗೂ ಮುನ್ನವೇ ಹೇರ್ ಸಲೂನ್, ಪಾರ್ಲರ್‌ಗಳನ್ನು ಮುಚ್ಚಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಮಾತ್ರ ಹೇರ್ ಸಲೂನ್ ಅಬಾಧಿತವಾಗಿ ಮುಂದುವರಿದಿದ್ದು, ಇದರಿಂದ ಜನರಲ್ಲಿ ಸೋಂಕಿನ ಭೀತಿ ಹೆಚ್ಚಿದೆ.
ಮನುಕುಲವನ್ನೇ ಕಪಿಮುಷ್ಠಿಯಲ್ಲಿ ಹಿಡಿದು ನರಕಯಾತನೆ ನೀಡುತ್ತಿರುವ ಕೊರೊನಾದಿಂದ ಜನ ಅಕ್ಷರಶಃ ನಲುಗಿದ್ದಾರೆ. ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ. ಇತ್ತ ಸಾರ್ವಜನಿಕರು ಸಾಧ್ಯವಾದಷ್ಟು ಸೋಂಕು ತಗುಲದಿರಲಿ ಎಂದು ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹಳ್ಳಿ ಪ್ರದೇಶದಲ್ಲಿ ಮಾತ್ರ ಸಾಮಾಜಿಕ ಅಂತರದ ಪರಿಜ್ಞಾನ ಇಲ್ಲದವರಂತೆ ವರ್ತಿಸುತ್ತಿದ್ದು, ಇದಕ್ಕೆ ಗ್ರಾಮಗಳಲ್ಲಿ ಹೇರ್ ಸಲೂನ್ ಸೇವೆ ಸಾಕ್ಷಿಯಾಗಿದೆ.
ಕೊರೊನಾ ಸೋಂಕು ಹರಡುವಿಕೆಗೆ ಹೇರ್ ಸಲೂನ್ ಮತ್ತು ಪಾರ್ಲರ್ ಅಂಗಡಿಗಳು ಬಹು ಮುಖ್ಯ ಕಾರಣವಾಗ ಬಲ್ಲದು. ಹಾಗಾಗಿ ಜಿಲ್ಲಾಡಳಿತ ಲಾಕ್‌ಡೌನ್ ಜಾರಿಗೊಳಿಸುವ ಮುನ್ನವೇ ಜಿಲ್ಲಾಡಳಿತ ಮಾ. 16ರಿಂದಲೇ ಅಂಗಡಿ ಮುಚ್ಚಲು ಆದೇಶಿಸಿ ಮಹತ್ವದ ಹೆಜ್ಜೆಯನ್ನಿಟ್ಟಿತ್ತು.
ಬೀದರ ನಗರ ಒಂದರಲ್ಲೇ ಸುಮಾರು 400 ಅಂಗಡಿಗಳಿಗೆ ಬೀಗ್ ಹಾಕಲು ಬಿಗಿ ಕ್ರಮ ಕೈಗೊಂಡಿತ್ತು. ನಗರ-ಪಟ್ಟಣ ಪ್ರದೇಶದಲ್ಲಿ ಲಾಕ್‌ಡೌನ್ ನಿಯಮ ಪಾಲಿಸುತ್ತಿರುವ ಜನ ಮನೆಯಲ್ಲೇ ಎಲೆಕ್ಟ್ರಿಕಲ್ ಮಷೀನ್‌ಗಳಿಂದ ಕೇಶ ಮುಂಡನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗ್ರಾಮಗಳಲ್ಲಿ ಇಂದಿಗೂ ಹೇರ್ ಕಟಿಂಗ್, ಶೇವಿಂಗ್ ಮುಂದುವರಿದಿದೆ.
ಅಂಗಡಿಗಳು ಬಾಗಿಲು ಹಾಕಿರುವುದರಿಂದ ಹಳ್ಳಿ ಹಳ್ಳಿಗೆ ತೆರಳಿ ಹೇರ್ ಸಲೂನ್ ಮಾಡುತ್ತಿದ್ದಾರೆ. ಈ ಸೇವೆಗೆ ಗ್ರಾಹಕರೊಂದಿಗೆ ಯಾವುದೇ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಹತ್ತಾರು ಜನರಿಗೆ ಸಲೂನ್ ಮಾಡುವವರು ಮಾಸ್ಕ್ ಧರಿಸುವುದು ಸೇರಿದಂತೆ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ, ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳುವುದು ಸೇರಿ ಶುಚಿತ್ವಕ್ಕೆ ಒತ್ತು ಕೊಡುತ್ತಿಲ್ಲ. ಇದು ಜಿಲ್ಲೆಯಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಸೋಂಕು ಹರಡುವಿಕೆ ಸಂದಿಗ್ಧ ಸ್ಥಿತಿಯಲ್ಲೂ ಗ್ರಾಮಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಹೇರ್ ಸಲೂನ್‌ಗೆ ಬ್ರೇಕ್ ಹಾಕಬೇಕಿದೆ. ಇಲ್ಲವೇ ಸಲೂನ್ ಮಾಡುವವರು ಮುಂಜಾಗ್ರತಾ ಕ್ರಮಗಳಾದರೂ ವಹಿಸಬೇಕಿದೆ. ಇಲ್ಲವಾದರೆ ದೊಡ್ಡ ಆತಂಕ ತಂದೊಡ್ಡುವ ಸಾಧ್ಯತೆ ಇದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ನನ್ನ ಹೇರ್ ಸಲೂನ್ ಅಂಗಡಿ ಬಂದ್ ಮಾಡಿದ್ದೇನೆ. ಈ ಉದ್ಯೋಗದಿಂದಲೇ ಜೀವನ ನಿರ್ವಹಿಸಬೇಕು. ಸದ್ಯ ಸಲೂನ್ ಅಪಾಯಕಾರಿ ಎಂಬುದು ತಿಳಿದಿದೆ. ಆದರೂ ಹೊಟ್ಟೆಪಾಡಿಗಾಗಿ ಗ್ರಾಮಗಳಿಗೆ ತೆರಳಿ ಸೇವೆ ಮಾಡುತ್ತಿದ್ದೇನೆ.
ಭೀಮಣ್ಣ ಕಲ್ಲಪ್ಪ,
ಸಲೂನ್ ಮಾಲೀಕ
ಶಶಿಕಾಂತ ಬಂಬುಳಗೆ