Advertisement

ಬೀದರ್: ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಿದ ಇಬ್ಬರು ವಿದ್ಯಾರ್ಥಿಗಳು

08:48 PM Mar 05, 2022 | Team Udayavani |

ಬೀದರ್: ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಗಡಿ ಜಿಲ್ಲೆಯ ನಾಲ್ವರು ವೈದ್ಯ ವಿದ್ಯಾರ್ಥಿಗಳ ಪೈಕಿ ಇಬ್ಬರು ಶನಿವಾರ ಸ್ವದೇಶಕ್ಕೆ ಆಗಮಿಸಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಸಹ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸುಪರ್ದಿಯಲ್ಲಿ ಸುರಕ್ಷಿತವಾಗಿದ್ದಾರೆ. ಹೀಗಾಗಿ ತೀವ್ರ ಆತಂಕದಲ್ಲಿದ್ದ ಮಕ್ಕಳ ಪಾಲಕರು ಈಗ ನಿಟ್ಟಿಸಿರುಬಿಟ್ಟಿದ್ದಾರೆ.

Advertisement

ಉಕ್ರೇನ್‌ನ ಖಾರ್ಕೀವ್ ನಗರದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ 4 ಜನ ವಿದ್ಯಾರ್ಥಿಗಳು ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿಯೇ ಸಿಲುಕಿದ್ದರು. ಯುದ್ಧೋನ್ಮಾದ ನೆಲದಲ್ಲಿ ಕ್ಷಿಪಣಿ, ಬಾಂಬ್ ದಾಳಿಗಳ ಆರ್ಭಟದಿಂದಾಗಿ ಸ್ವದೇಶಕ್ಕೆ ಮರಳು ವಿದ್ಯಾರ್ಥಿಗಳು ಒಂದು ವಾರದಿಂದ ಪರದಾಡುತ್ತಿದ್ದರು. ಕೇಂದ್ರ ಸರ್ಕಾರದ ‘ಆಪರೇಶನ್ ಗಂಗಾ’ದಡಿ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ವೈಷ್ಣವಿರಡ್ಡಿ ಶನಿವಾರ ಬೆಳಗ್ಗೆ 7ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕರ್ನಾಟಕ ಭವನದಲ್ಲಿ ತಂಗಿದ್ದಾರೆ. ಮಾ. 6 ರಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಗರದ ಮಂಗಲಪೇಟ್ ನಿವಾಸಿ ಅಮೀತ್ ಸಿರಂಜೆ ಅವರು ಶನಿವಾರ ಸಂಜೆ 6 ಕ್ಕೆ ಹೈದರಾಬಾದ್
ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.


ಇನ್ನಿಬ್ಬರು ವಿದ್ಯಾರ್ಥಿಗಳಾದ ಶಶಾಂಕ್ ಮತ್ತು ವಿವೇಕ್ ಅವರು ಖಾರ್ಕಿವ್‌ನಿಂದ ಪಿಸೋಚಿನ್ ಎಂಬ ಸ್ಥಳಕ್ಕೆ ಬಂದು ಭಾರತೀಯ ರಾಯಭಾರ ಕಚೇರಿಯ ಸುಪರ್ದಿಯಲ್ಲಿ ಸುರಕ್ಷಿತವಾಗಿದ್ದಾರೆ. ಇವರನ್ನು ದೇಶಕ್ಕೆ ಕರೆತರುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿದೆ. ಉಕ್ರೇನ್‌ನಲ್ಲಿದ್ದ ಮಕ್ಕಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಪಾಲಕರು ಗಾಬರಿಗೊಂಡಿದ್ದರು. ಈಗ ಎಲ್ಲ ಮಕ್ಕಳು ಸಹ ಸುರಕ್ಷಿತವಾಗಿ ಒಬ್ಬೊಬ್ಬರೇ ಮರಳುತ್ತಿರುವುದರಿಂದ ಪಾಲಕರಿಗೆ ಸಮಾಧಾನ ತಂದಿದೆ.

ಬಂಧು ಮಿತ್ರರು ಹರ್ಷ: ವೈಷ್ಣವಿ ಅವರು ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಬಂಧು ಮಿತ್ರರೊಂದಿಗೆ ಫೋಟೊ ತೆಗೆಯಿಸಿಕೊಂಡು ತಾಯ್ನಾಡು ಭಾರತಕ್ಕೆ ಮರಳಿದ ಸಂತಸವನ್ನು ವ್ಯಕ್ತಪಡಿಸಿದರು. ಅದೇ ರೀತಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಅಮಿತ್ ಅವರು ಆಗಮಿಸುತ್ತಿದ್ದಂತೆ ಅವರ ಕುಟುಂಬ ವರ್ಗದವರು ಹೂಗುಚ್ಚ ನೀಡಿ ಸಂತಸದಿಂದ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next