Advertisement

Bidar: ನಿವೇಶನಗಳ ವಾಪಸ್ ಕೊಟ್ರೂ ಸಿದ್ದರಾಮಯ್ಯ ಕುಟುಂಬಕ್ಕೆ ಕಂಟಕ ತಪ್ಪಲ್ಲ: ಶಾಸಕ ಬೆಲ್ದಾಳೆ

10:42 PM Oct 02, 2024 | Team Udayavani |

ಬೀದರ್‌: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು, ಪ್ರಕರಣದ ತನಿಖೆಯ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾ ಅವ್ಯವಹಾರ ಪ್ರಕರಣ ಲೋಕಾಯುಕ್ತ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಲೋಕಾಯುಕ್ತ ರಾಜ್ಯ ಸರಕಾರದ ಅಧೀನದಲ್ಲಿರುವುದರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಎಫ್ಐಆರ್ ದಾಖಲಿಸಲೂ ಒಂದು ದಿನ ವಿಳಂಬ ಮಾಡಲಾಗಿತ್ತು. ಹೀಗಾಗಿ ನಿಷ್ಪಕ್ಷಪಾತ ತನಿಖೆ ಆಗಿ, ಸತ್ಯಾಂಶ ಹೊರಬರಬೇಕಾದರೆ ಸಿಬಿಐಗೆ ವಹಿಸುವುದು ಸೂಕ್ತ ಎಂದು ಹೇಳಿದರು.

ಲೋಕಾಯುಕ್ತ ಮತ್ತು ಇಡಿ ತನಿಖೆಯ ಭಯದಿಂದ  ತಮ್ಮ ಕುರ್ಚಿ ಉಳಿಸಿಕೊಳ್ಳಲು ಈಗಾಗಲೇ ಸಿಎಂ ಸಿದ್ದರಾಮಯ್ಯ  ತಮ್ಮ ಪತ್ನಿ ಮೂಲಕ ವಿವಾದಿತ 14 ನಿವೇಶನಗಳ  ಹಿಂದಿರಿಗಿಸುವ ಕುರಿತು ಪತ್ರ ಬರೆದಿದ್ದಾರೆ. ಇದು ಒಂದು ರೀತಿಯ ನಾಟಕವಷ್ಟೇ. ನಿವೇಶನಗಳ ವಾಪಸ್ ಕೊಟ್ಟರೂ ಸಿಎಂಗೆ ಕಂಟಕ ತಪ್ಪಿದ್ದಲ್ಲ. ಯಾವುದೇ ಸಮಯದಲ್ಲೂ ಜಾರಿ ನಿರ್ದೇಶನಾಲಯದಿಂದ ಸಿದ್ದರಾಮಯ್ಯರಿಗೆ ನೋಟಿಸ್ ಹೋಗಬಹುದು ಎಂದು ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆ ಬಲಪಡಿಸಿದ್ದರು, ಈ ಮೊದಲು ಸಿಎಂ ಆಗಿದ್ದ ಸಿದ್ದರಾಮಯ್ಯ ಎಸಿಬಿ ರಚಿಸಿ ಲೋಕಾಯುಕ್ತ ದುರ್ಬಲಗೊಳಿಸಿದರು. ತಮ್ಮ ಅವಧಿಯ ಪ್ರತಿ ಅವ್ಯವಹಾರದ ಪ್ರಕರಣಗಳ ಎಸಿಬಿಗೆ ಕೊಟ್ಟು, ರಕ್ಷಣೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಸಿದ್ದು ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಬ್ಬ ಶಾಸಕನ ನಾಲಿಗೆ ಕಟ್ ಮಾಡುತ್ತೇನೆ ಎಂದು ಎಂಎಲ್‌ಸಿ ಯೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಪಕ್ಷದಿಂದ ದೂರು ದಾಖಲಿಸಿದ್ದರೂ ಈವರೆಗೆ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.

Advertisement

ಶಾಸಕ ಶರಣು ಸಲಗರ್ ಮಾತನಾಡಿ, ಸಿಎಂ ತಮ್ಮ 40 ವರ್ಷ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಜಂಬ ಕೊಚ್ಚಿಕೊಂಡಿದ್ದರು. ಬಿಎಸ್‌ವೈ ವಿರುದ್ಧ ದೂರು ದಾಖಲಾದಾಗ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸುವಂತೆ ಈ ಹಿಂದೆ ಸಿದ್ದರಾಮಯ್ಯ ಅವರೇ ಹೇಳಿದ್ದರು. ಈಗ ಅವರು ಕೂಡ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಾಬು ವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ಬಸವರಾಜ ಪವಾರ್ ಮತ್ತು ಗುರುನಾಥ ರಾಜಗೀರಾ ಇದ್ದರು.

ನಾಯಕರ ವಿರುದ್ಧ ಹೇಳಿಕೆ ಸರಿಯಲ್ಲ: ಶೈಲೇಂದ್ರ ಬೆಲ್ದಾಳೆ 
ಯತ್ನಾಳ್ ಹಿರಿಯ ನಾಯಕರಾಗಿದ್ದು, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ಈ ಹಿಂದೆ ಬಿಜೆಪಿ ಬಿಟ್ಟು, ಮತ್ತೆ ವಾಪಸ್ಸಾದವರು. ಅವರಿಗೆ ಪಕ್ಷ ಗೌರವ, ಅಧಿಕಾರ ಎಲ್ಲವನ್ನು ನೀಡಿದೆ. ಆದರೆ, ನಮ್ಮ ನಾಯಕರ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ. ಬಸವನಗೌಡ ಪಾಟೀಲ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿ ಹಿರಿಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಇದೆಲ್ಲವನ್ನು ಬಿಜೆಪಿ ವರಿಷ್ಠ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶೀಘ್ರದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

“ಬಿಜೆಪಿ ಸದಸ್ಯತ್ವಕ್ಕೆ ಬೀದರ ಜಿಲ್ಲೆಗೆ 3.80 ಲಕ್ಷ ಗುರಿ ಇದ್ದು, 20 ದಿನದಲ್ಲಿ 2.25 ಲಕ್ಷ (ಶೇ.60) ಸದಸ್ಯತ್ವ ಆಗಿದೆ. ರಾಜ್ಯದಲ್ಲಿ ಬೀದರ ಮೊದಲ ಸ್ಥಾನದಲ್ಲಿದೆ. ಅ. 15ರವರೆಗೆ ಶೇ. 100 ರಷ್ಟು ಗುರಿ ಸಾಧಿಸಲಾಗುವುದು. ಬಸವಕಲ್ಯಾಣ ಮತ್ತು ಔರಾದ್ ಕ್ಷೇತ್ರಗಳು ತಮ್ಮ ಗುರಿಯನ್ನು ಈಗಾಗಲೇ ಸಾಧಿಸಿವೆ.” -ಸೋಮನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ, ಬೀದರ್‌

Advertisement

Udayavani is now on Telegram. Click here to join our channel and stay updated with the latest news.

Next