Advertisement
ತೀರ್ಪು ಹೊರಬೀಳುತ್ತಿದ್ದಂತೆ ಒಬ್ಬೊಬ್ಬರಾಗಿಯೇ ಸಿಎಂ ನಿವಾಸದತ್ತ ದೌಡಾಯಿಸಿದ ಶಾಸಕ, ಸಚಿವರು ಸಿದ್ದರಾಮಯ್ಯ ಪರವಾಗಿ ತಾವೆಲ್ಲ ಇದ್ದೇವೆ ಎಂಬ ಸಂದೇಶ ನೀಡುವ ಪ್ರಯತ್ನ ಮಾಡಿದರು. ಅದರಲ್ಲೂ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ್, ಶಿವರಾಜ ತಂಗಡಗಿ, ಶಾಸಕರಾದ ಆರ್.ವಿ. ದೇಶಪಾಂಡೆ, ಅಶೋಕ್ ಪಟ್ಟಣ್, ಪ್ರಕಾಶ್ ರಾಥೋಡ್, ಐವನ್ ಡಿ’ಸೋಜಾ ಸೇರಿ ಅನೇಕರು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಜತೆಗಿರುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡುವುದಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.
ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ “ಬ್ಯುಸಿ’ ಆಗಿರುವುದರ ನಡುವೆಯೂ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ತೀರ್ಪು ಸಹಿತ ವರದಿ ಕೇಳಿದೆ ಎನ್ನಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 17ಎ ಅಡಿ ಹೈಕೋರ್ಟ್ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದೆ. ಆ ಮೂಲಕ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿದೆ. ಇದರ ಪ್ರತಿಯನ್ನು ಸಲ್ಲಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಅಷ್ಟೇ ಅಲ್ಲ ಈ ಸಂಬಂಧ ವರದಿಯನ್ನೂ ನೀಡುವಂತೆ ಹೇಳಿದೆ. ಇದನ್ನು ಕಾನೂನು ತಜ್ಞರೊಂದಿಗೆ ಪರಿಶೀಲನೆ ನಡೆಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement