ಬೀದರ: ಜಿಲ್ಲೆಯಲ್ಲಿ ರಣಕೇಕೆ ಮತ್ತು ಪರ-ವಿರೋಧದ ಚರ್ಚೆ ಮಧ್ಯೆಯೂ ಶಿಕ್ಷಣ ಇಲಾಖೆ ಗಡಿ ನಾಡು ಬೀದರನಲ್ಲಿ ಗೊಂದಲ ಮುಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸಿದೆ.
ಜಿಲ್ಲೆಯ 27,334 ಮಕ್ಕಳು ಪರೀಕ್ಷೆ ಬರೆಯಲು ಸನ್ನದ್ಧರಾಗಿದ್ದಾರೆ. ತ್ರಿಶತಕ ದಾಟುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ವೈರಸ್ ಆರ್ಭಟಿಸುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಮಕ್ಕಳ ಭವಿಷ್ಯಕ್ಕೆ ಅಡಿಪಾಯವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವಿಶೇಷ ವ್ಯವಸ್ಥೆಗಳ ಮೂಲಕ ಪಾರದರ್ಶಕ ಮತ್ತು ಜಾಗರೂಕತೆಯಿಂದ ನಡೆಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಪ್ರದೇಶದಲ್ಲಿ ಪರೀಕ್ಷೆ ನಡೆಸದಂತೆ ಹಾಗೂ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಅಂಥವರ ಮಕ್ಕಳ ಅನುಕೂಲಕ್ಕಾಗಿ ತಾವು ಇಚ್ಛಿಸಿದ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ಮತ್ತು ಪರೀಕ್ಷಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯ ಕಲ್ಪಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ವ್ಯವಸ್ಥೆಗೆ ಕ್ರಮ ವಹಿಸುತ್ತಿದೆ.
ಪ್ರತಿ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಅರೋಗ್ಯ ತಪಾಸಣಾ ಕೇಂದ್ರ ಕೌಂಟರ್ ಸ್ಥಾಪಿಸುವುದು, ತಪಾಸಣೆ ವೇಳೆ ಯಾವುದೇ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಪರೀಕ್ಷೆ ಮುಗಿದ ಬಳಿಕ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿಗಳು ಸಭೆ ಮೂಲಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಸೋಂಕು ಆತಂಕ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿ, ಪೀಠೊಪಕರಣಗಳಿಗೆ ಸ್ಯಾನಿಟೈಜ್ ಮಾಡುವುದು, ಕೊಠಡಿಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗೆ ಒತ್ತು ನೀಡಬೇಕು. ಪರೀಕ್ಷೆಯ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ಕಡ್ಡಾಯವಾಗಿ ಹ್ಯಾಂಡ್‌ಗ್ಲೋಜ್, ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಲು ಸೂಚಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ನಿಯಮ ಪಾಲನೆ ಕಡ್ಡಾಯ ಮಾಡಿದ್ದರಿಂದ ಮಕ್ಕಳು ಬಹುಬೇಗನೆ ಪರೀಕ್ಷಾ ಕೇಂದ್ರ ತಲುಪಬೇಕಾಗಿದೆ. ಹೀಗಾಗಿ ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಆರ್. ರಾಮಚಂದ್ರನ್ ಅವರು ಎನ್ ಈಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ್ದಾರೆ. ಜತೆಗೆ ಖಾಸಗಿ ಶಾಲೆಗಳ ಹೆಚ್ಚುವರಿ ಬಸ್ ಬಳಸಿಕೊಳ್ಳಲು ಹಾಗೂ ಸಾರಿಗೆ ವ್ಯವಸ್ಥೆ ಸಾಧ್ಯವಾಗದ ಕಡೆ ಸರ್ಕಾರಿ ಇಲಾಖೆಗಳ ಜೀಪ್ ಅಥವಾ ಇತರೆ ವಾಹನ ಬಳಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ.
ಬೀದರ ಶೈಕ್ಷಣಿಕ ಜಿಲ್ಲೆಯಲ್ಲಿ ಯಾವುದೇ ಗೊಂದಲ ಎದುರಾಗದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 99 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 10 ಉಪ ಕೇಂದ್ರಗಳು, 3 ಸೂಕ್ಷ್ಮ ಮತ್ತು 2 ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. 27,334 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಪರೀಕ್ಷಾರ್ಥಿಗಳ ಅರೋಗ್ಯ ರಕ್ಷಣೆಗಾಗಿ ಕೇಂದ್ರಗಳಿಗೆ 40 ಸಾವಿರ ಮಾಸ್ಕ್ಗಳನ್ನು ಪೂರೈಸಲಾಗಿದೆ.
ಚಂದ್ರಶೇಖರ,
ಡಿಡಿಪಿಐ, ಬೀದರ
ಶಶಿಕಾಂತ ಬಂಬುಳಗೆ