ಬೀದರ: ಪೌರಾಣಿಕ ಇತಿಹಾಸ ಹೊಂದಿದ ಇಲ್ಲಿನ ನರಸಿಂಹ ಸ್ವಾಮಿ ಝರಣಿಯಲ್ಲಿ ನೀರಿನ ಕೊರತೆ ಇರುವುದರಿಂದ ದೇವರ ದರ್ಶನಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದ ಗುಹೆಗೆ ಕಾರಂಜಾ ಜಲಾಶಯದ ನೀರು ಹರಿಸುತ್ತಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ದೇವರ ದರ್ಶನ ಸಿಗದ ಕಾರಣ ಇಲ್ಲಿನ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಇದೀಗ ನರಸಿಂಹ ಸ್ವಾಮಿ ಜಯಂತಿ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ನರಸಿಂಹ ಸ್ವಾಮಿಯ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರಂಜಾ ಜಲಾಶಯದ ನೀರು ಹರಿಸಲು ಮುಂದಾಗಿದೆ.
ದೇವಸ್ಥಾನದ ಗುಹೆಯಲ್ಲಿ ನೀರಿದ್ದರೆ ಮಾತ್ರ ದೇವರ ದರ್ಶನಕ್ಕೆ ಮಹತ್ವ ಎಂಬ ನಂಬಿಕೆ ಇಲ್ಲಿದೆ. ಕೆಲವು ತಿಂಗಳಿಂದ ಗುಹೆಯಲ್ಲಿ ನೀರಿಲ್ಲದ ಕಾರಣ ದೇವರ ದರ್ಶನ ಸಂಪೂರ್ಣ ಬಂದ್ ಆಗಿತ್ತು. ನೀರು ಇಲ್ಲದೆ ಗುಹೆಯಲ್ಲಿ ಬಿರುಕುಗಳು ಕಂಡು ಬರುತ್ತಿವೆ ಎಂಬ ಮಾತುಗಳು ಕೂಡ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುಹೆಯಲ್ಲಿ ಕಾರಂಜಾ ಜಲಾಶಯದ ನೀರು ಹರಿಸುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ಮೇ 17ರಿಂದ ನರಸಿಂಹ ಸ್ವಾಮಿಯ ಜಯಂತಿ ಆಚರಣೆ ನಡೆಯಲಿರುವುದರಿಂದ ದೂರದಿಂದ ಬರುವ ಭಕ್ತರಿಗೆ ಸ್ವಾಮಿಯ ದರ್ಶನ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತದ ಅಧಿಕಾರಿಗಳು ಎರಡು ದಿನಗಳಿಂದ ನೀರು ಹರಿಸುವ ಕಾರ್ಯಕ್ಕೆ ಮುಂದಾಗಿದ್ದು, ದೇವಸ್ಥಾನದ ಗುಹೆಯಲ್ಲಿ ನೀರು ನಿಲ್ಲಿಸಲಾಗುತ್ತಿದೆ. ಆದರೆ ಗುಹೆಯಲ್ಲಿ ಹರಿಸಿದ ನೀರು ಇಂಗುತ್ತಿದೆ ಎಂದು ತಿಳಿದುಬಂದಿದ್ದು, ಮಳೆ ಸುರಿಯುವವರೆಗೆ ನೀರು ನಿಲ್ಲಿಸುವ ಕೆಲಸ ಮಾಡಿದರೆ ದೇವಸ್ಥಾನದ ಗುಹೆ ಸುರಕ್ಷಿತವಾಗಿ ಉಳಿಯುತ್ತದೆ ಎಂಬ ಅನಿಸಿಕೆಯನ್ನು ಭಕ್ತರು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಮಹಾದೇವ ಮಾತನಾಡಿ, ಭಕ್ತರ ಹಿತದೃಷ್ಟಿಯಿಂದಾಗಿ ನಗರದ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ನರಸಿಂಹ ಝರಣಿಗೆ ಕಾರಂಜಾ ನದಿ ನೀರನ್ನು ಪೂರೈಸಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ನದಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಖುದ್ದು ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ನೀರು ಪೂರೈಕೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಬಹು ದಿನಗಳಿಂದ ನರಸಿಂಹ ಸ್ವಾಮಿ ದರ್ಶನ ಪಡೆಯಬೇಕು ಎಂದಿರುವ ಸಾವಿರಾರುೂ ಭಕ್ತರ ಆಸೆ ಈಡೇರುವ ಸಾಧ್ಯತೆ ಹೆಚ್ಚಿದೆ. ಆದರೆ, ಸದ್ಯ ಶುಕ್ರವಾರ ಸಂಜೆ ವರೆಗೂ ಗುಹೆಯಲ್ಲಿ ದೇವರ ದರ್ಶನಕ್ಕೆ ಯಾರಿಗೂ ಪ್ರವೇಶ ನೀಡಿಲ್ಲ.
ನರಸಿಂಹ ಸ್ವಾಮಿ ಜಯಂತಿ ನಿಮಿತ್ತ ದೇವರ ದರ್ಶನ ಕಲ್ಪಿಸುವುದಕ್ಕಾಗಿ ಕಾರಂಜಾ ಜಲಾಶಯದ ನೀರು ಬಿಡಲಾಗಿದೆ. ಇದರಿಂದ ಕಾರಂಜಾ ಜಲಾಶಯದಿಂದ ವಿವಿಧೆಡೆ ಪೂರೈಕೆ ಆಗುತ್ತಿರುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಒಂದು ಬಾರಿ ಗವಿಗೆ ಹರಿಸಿದ ನೀರನ್ನು ಪದೆಪದೇ ಶುದ್ಧೀಕರಣ ಮಾಡಿದರೆ ತಿಂಗಳ ಕಾಲ ಅದೇ ನೀರು ಬಳಸಬಹುದಾಗಿದೆ. ಈಗಾಗಲೇ ನೀರು ಶುದ್ಧೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನಿರಂತರ ದೇವರ ದರ್ಶನ ಕಲ್ಪಿಸಬೇಕು ಎಂಬ ಉದ್ದೇಶ ಇದೆ.
•
ಡಾ| ಎಚ್.ಆರ್. ಮಹಾದೇವ,
ಜಿಲ್ಲಾಧಿಕಾರಿಗಳು ಬೀದರ್
ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಕಾರಂಜಾ ಜಲಾಶಯದ ನೀರನ್ನು ಪೈಪ್‌ಲೈನ್ ಮೂಲಕ ಬಿಡಲಾಗುತ್ತಿದೆ. ದೇವಸ್ಥಾನದ ಗುಹೆಯಲ್ಲಿ ಈಗಾಗಲೇ ನೀರು ತುಂಬಿಸುವ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಸಾರ್ವಜನಿಕರಿಗೆ ದೇವರ ದರ್ಶನ ಕಲ್ಪಿಸಲಾಗುವುದು.
•
ಡಾ| ಶಂಕರ ವಣಕ್ಯಾಳ,
ಸಹಾಯಕ ಆಯುಕ್ತರು
ದುರ್ಯೋಧನ ಹೂಗಾರ