Advertisement

Bidar Lok Sabha ಕ್ಷೇತ್ರ: ಯುವಜನರ ಧ್ವನಿಯಾಗಲು ಕಣಕ್ಕಿಳಿದಿರುವೆ- ಸಾಗರ ಖಂಡ್ರೆ

02:54 PM Apr 01, 2024 | Team Udayavani |

ರಾಜ್ಯದ ಲೋಕಸಭಾ ಕಣದಲ್ಲಿ 26 ವಯಸ್ಸಿನ ಅತ್ಯಂತ ಕಿರಿಯ ಅಭ್ಯರ್ಥಿ ಸಾಗರ್‌ ಖಂಡ್ರೆ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ಹಿರಿಯ ಕಾಂಗ್ರೆಸ್‌ ನಾಯಕ ಭೀಮಣ್ಣ ಖಂಡ್ರೆ ಮೊಮ್ಮಗ, ಸದ್ಯ ಸಚಿವರಾಗಿರುವ ಈಶ್ವರ್‌ ಖಂಡ್ರೆ
ಅವರ ಪುತ್ರರಾಗಿರುವ ಇವರು ಕೇಂದ್ರ ಸಚಿವ ಭಗವಂತ್‌ ಖೂಬಾ ಅವರನ್ನು ಎದುರಿಸುತ್ತಿದ್ದಾರೆ.  ಹೊಸ ಮುಖ ಸಂದರ್ಶನ…

Advertisement

*ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ತುಂಬಾ ಖುಷಿಯಾಗುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣೆ ಹಬ್ಬದಲ್ಲಿ ಸ್ಪರ್ಧೆ ಮಾಡುತ್ತಿರುವುದು ನಿಜಕ್ಕೂ ಸಂತಸ ಹಾಗೂ ಹೆಮ್ಮೆ ಅನಿಸುತ್ತಿದೆ.

*ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ ಮತ್ತು ಪ್ರೇರಣೆ ಏನು?
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಸಂಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ದೇಶದ ಭವಿಷ್ಯವಾಗಿರುವ ಯುವಕರ ಸಮಸ್ಯೆ ಗಳಿಗೆ ಧ್ವನಿಯಾಗಬೇಕು ಎಂಬುದು ಮುಖ್ಯ ಉದ್ದೇಶ.

*ರಾಜಕೀಯದಲ್ಲಿ ನಿಮ್ಮ ಗಾಡ್‌ ಫಾದರ್‌ ಯಾರು ಮತ್ತು ಯಾಕೆ?
ನಮ್ಮ ಅಜ್ಜ ಲೋಕನಾಯಕ ಡಾ| ಭೀಮಣ್ಣ ಖಂಡ್ರೆ ಹಾಗೂ ತಂದೆ ಈಶ್ವರ ಖಂಡ್ರೆ ಅವರೇ ನನಗೆ ಗಾಡ್‌ ಫಾದರ್‌. ಅವರು ಮಾಡುತ್ತ ಬಂದಿರುವ ಜನಸೇವೆ ಹಾಗೂ ಹೋರಾಟವೇ ಪ್ರೇರಣೆ.

*ಮೊದಲ ಪ್ರಯತ್ನದಲ್ಲೇ ನೀವು ಲೋಕ ಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟಿದೆ. ಯುವಕರ ಪರ ಧ್ವನಿಯಾಗುವ ಬಯಕೆ ಇದೆ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ.

Advertisement

*ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಜನಸೇವೆ ಮಾಡುವ ಉದ್ದೇಶದಿಂದ ಚುನಾವಣ ರಾಜಕೀಯಕ್ಕೆ ಬಂದಿದ್ದೇನೆ. ಕ್ಷೇತ್ರದ ಪ್ರತಿಯೊಬ್ಬರಿಗೂ 24/7 ಲಭ್ಯವಿರುತ್ತೇನೆ. ಜತೆಗೆ ಬೀದರ್‌ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕುಟುಂಬದ ಕೊಡುಗೆ ಸಾಕಷ್ಟಿದೆ. ನನಗೂ ಅಂಥ ಸೇವೆ ಮಾಡಲು ಅವಕಾಶ ನೀಡಲಿ ಎಂದು ಮನವಿ ಮಾಡಿ ಕೊಳ್ಳುತ್ತೇನೆ.

*ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ 5 ಕಾರಣ ತಿಳಿಸಿ.
ನಾನು ಯುವಕನಾಗಿದ್ದು, ಯುವಕರ ಜತೆಗೆ ಎಲ್ಲ ರೊಂದಿಗೆ ಬೇಗ ಸಂಪರ್ಕ ಸಾಧಿಸುತ್ತೇನೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೂ ತಲುಪಿದ್ದು, ಅವುಗಳ ಫ‌ಲ ನನಗೆ ಲಭಿಸಲಿದೆ. ಖಂಡ್ರೆ ಕುಟುಂಬದ ಶುದ್ಧ ರಾಜಕೀಯ, ಜನಪರ ಸೇವೆ. ಹಾಲಿ ಸಂಸದರ ಎರಡು ಅವಧಿಯಲ್ಲಿ ಕ್ಷೇತ್ರಕ್ಕೆ ಶೂನ್ಯ ಕೊಡುಗೆ. ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ ಜತೆಗೆ
ಸ್ಥಳೀಯವಾಗಿ ಎಲ್ಲರಿಗೂ ಲಭ್ಯ ವಾಗಿರುತ್ತೇನೆ.

*ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಲು ಬಯಸಿದ್ದೀರಿ?
ಕ್ಷೇತ್ರದ ಯುವಕರು, ರೈತರು, ಮಹಿಳೆಯರು ಹಾಗೂ ಬಡ ಜನರ ಧ್ವನಿಯಾಗಲು ಬಯಸುತ್ತೇನೆ. ಸಂಸತ್‌ನಲ್ಲಿ ಇಲ್ಲಿನ ಸಮಸ್ಯೆ ಗಳನ್ನು ವಿವರಿಸಿ ಪರಿಹಾರ ಕಂಡು ಕೊಳ್ಳುತ್ತೇನೆ.

*ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಶ್ರಮ ವಹಿಸುತ್ತೇನೆ. ಇದು ನನ್ನ ಆದ್ಯತೆಯ ಕೆಲಸ.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು, ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತೇಜನ, ಗುಣಮಟ್ಟದ ಆಸ್ಪತ್ರೆಗಳ ನಿರ್ಮಾಣ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ.

*ಚುನಾವಣೆ ವೇಳೆ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಎಲ್ಲ ಹಿರಿಯರ ಆಶೀರ್ವಾದ ಮತ್ತು ಬೆಂಬಲ ನನ್ನ ಜತೆಗಿದೆ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಗೆಲ್ಲುವೆ.

Advertisement

Udayavani is now on Telegram. Click here to join our channel and stay updated with the latest news.

Next