Advertisement
ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಜಲಸಂಗ್ವಿ ಗ್ರಾಮದಲ್ಲಿರುವ ಪುರಾತನ ಕಲ್ಮೇಶ್ವರ ದೇವಾಲಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಅನಾಥವಾಗಿ ಜನರಿಂದ ದೂರವಾಗುವ ಸ್ಥಿತಿಗೆ ಬಂದಿದೆ. 900ಕ್ಕೂ ಅಧಿಕ ವರ್ಷಗಳ ಹಿಂದೆ ಕಲ್ಯಾಣ ಚಾಲುಕ್ಯರ ಅರಸ 6ನೇ ವಿಕ್ರಮಾಧಿತ್ಯನು ಈ ದೇವಾಲಯ ನಿರ್ಮಾಣ ಮಾಡಿದ್ದಾರೆಂದು ಪ್ರವಾಸ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ರಾಮಾಯಣದ ಪಾಂಡವ ಸಹೋದರರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಸಮಯ ಕಳೆದರು ಎಂದು ನಂಬಲಾಗಿದೆ.
Related Articles
Advertisement
ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದರೂ ಇದರ ಜಿರ್ಣೋದ್ಧಾರ ಕಾರ್ಯ ಮಾತ್ರ ಇಲ್ಲಿಯವರೆಗೂ ನಡೆದಿಲ್ಲ. ಅನೇಕ ಬಾರಿ ಭೇಟಿ ನೀಡಿದ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ದೇವಸ್ಥಾನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿರುವ ಮೂಲಕ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾಡುವ ಭರವಸೆಗಳು ಇಂದಿಗೂ ಈಡೇರಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಐತಿಹಾಸಿಕ ದೇವಾಲಯ ಇದೀಗ ಪುಂಡ ಪೋಕರಿಗಳ ಅಡ್ಡವಾಗಿ ಪರಿವರ್ತನೆಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಇಂತಹ ದೇವಸ್ಥಾನಗಳಿಗೆ ಸೂಕ್ತ ರಕ್ಷಣೆ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಬೀದರ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಬೇಬಿ ಪ್ರತಿಕ್ರಿಯೆ ನೀಡಿದ್ದು, ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸುತ್ತುಗೋಡೆ ನಿರ್ಮಿಸುವ ಕೆಲಸ ನಡೆಯಲಿದೆ. ಪ್ರವಾಸಿಗರು ಇಲ್ಲಿಗೆ ಬಂದಾಗ ಅವರಿಗೆ ಮೂಲಸೌಕರ್ಯಗಳು ಒದಗಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಸೌಲಭ್ಯಗಳು ಒದಗಿಸುವುದಾಗಿ ಹೇಳಿದ್ದಾರೆ. ಬೆಳಕಿಗೆ ಬಾರದ ದೇವಸ್ಥಾನ ಇದಾಗಿದ್ದು ಬೆಳಕಿಗೆ ತರುವ ಕಾರ್ಯ ಇಲಾಖೆ ಮಾಡಲಿದೆ ಎಂದು ತಿಳಿಸಿದ್ದಾರೆ.
ವರದಿ: ದುರ್ಯೋಧನ ಹೂಗಾರ