ಬೀದರ:2025ರ ವೇಳೆಗೆಕಲ್ಯಾಣ ಕರ್ನಾಟಕವನ್ನು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಆಗಿಸುವ ಗುರಿ ಹೊಂದಲಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಬೆಂಗಳೂರಿನ ಆ್ಯಕ್ಟ್ ಸಂಸ್ಥೆ ಹಾಗೂ ಡಯಟ್ ಸಹಯೋಗದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರಿಗೆ ಇಲ್ಲಿನ ಡಯಟ್‌ನಲ್ಲಿ ಆಯೋಜಿಸಿರುವ 12 ದಿನಗಳ ಸೃಜನಾತ್ಮಕ ಬೋಧನೆ ಹಾಗೂ ಹೊಸ ಶಿಕ್ಷಣ ನೀತಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸಂಘದಿಂದ ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಹೊಸ-ಹೊಸ ಆವಿಷ್ಕಾರಗಳ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯ ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಶಿಕ್ಷಕರು ಮಕ್ಕಳ ಆಸಕ್ತಿ ಕೆರಳಿಸುವಂತೆ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು. ವಿಷಯವನ್ನು ಬಹಳ ಸರಳವಾಗಿ ಮನನ ಮಾಡಬೇಕು.
ತರಬೇತಿಗಳ ಮೂಲಕ ಜ್ಞಾನಮಟ್ಟ ಹೆಚ್ಚಿಸಿಕೊಂಡು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಹೈ-ಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ನಂತರ ಈ ಭಾಗದ ಜನರಲ್ಲಿನ ದಾಸ್ಯದ ಭಾವನೆ ದೂರವಾಗಿದೆ. ಕಲ್ಯಾಣ ಕರ್ನಾಟಕದವರೆಂಬ ಹೆಮ್ಮೆ, ಸ್ವಾಭಿಮಾನ ಪ್ರತಿಯೊಬ್ಬರಲ್ಲೂ ಮೂಡಿದೆ ಎಂದು ತಿಳಿಸಿದರು.
ಇನ್‌ಸ್ಪೆ ರ್ ಅವಾರ್ಡ್ ಮಾನಕ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಭಾತಂಬ್ರಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಓವೆಸ್ ಅಹಮ್ಮದ್ ಖಲೀಲ್ ಅವರನ್ನು ಸನ್ಮಾನಿಸಲಾಯಿತು. ಡಯಟ್ ಪ್ರಾಚಾರ್ಯ ಬಿ.ಕೆ. ದಿಗಂಬರ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ ಸಂತೋಷ ಪೂಜಾರಿ, ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ವಿವೇಕಾನಂದ, ರವೀಂದ್ರ, ಭವ್ಯ, ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ್ ಎಸ್, ವೀರೇಶ ಸ್ವಾಮಿ ಇದ್ದರು. ಜಿಲ್ಲೆಯ 8 ತಾಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ 180 ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು.