Advertisement

ಬೀದರ ಜನಮನ ತಟ್ಟುವಲ್ಲಿ ಯಶಸ್ವಿ

12:04 PM Jun 07, 2020 | Naveen |

ಬೀದರ: ತಾವು ಬೀದರ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡುವಾಗ ಎಲ್ಲ ಮಿತಿಯಲ್ಲಿ ಮತ್ತು ಹಲವು ತೊಡಕುಗಳ ಮಧ್ಯೆಯೂ ಜನಮನ ತಟ್ಟಲಿಕ್ಕೆ ಯಶಸ್ವಿಯಾಗಿದ್ದೇವೆ ಎನ್ನುವುದೇ ಒಂದು ದೊಡ್ಡ ಸಾಧನೆ ಎಂದು ತಾವು ಭಾವಿಸಿಕೊಂಡಿರುವುದಾಗಿ ಬಿಡಿಎ ಆಯುಕ್ತರಾಗಿ ವರ್ಗಾವಣೆಯಾಗಿರುವ ಡಾ| ಎಚ್‌.ಆರ್‌. ಮಹಾದೇವ ಹೇಳಿದರು.

Advertisement

ನಗರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಕೆಲಸ ಮಾಡಿದ ರೀತಿ, ತಾವು ಕೈಗೊಂಡ ಕಾರ್ಯಕ್ರಮಗಳ ಗುಣಾತ್ಮಕತೆಯನ್ನು ಜಿಲ್ಲೆಯ ಜನರು ಮೆಚ್ಚಿದ್ದಾರೆ ಎಂದು ಹೇಳಿದರು. ಜನರು ತಮ್ಮನ್ನು ಮತ್ತು ತಮ್ಮ ಆಡಳಿತದ ವೈಖರಿ ಒಪ್ಪಿಕೊಂಡಿದ್ದಾರೆ. ತಾವು ಅಧಿಕಾರಿಗಳ ತಂಡದ ಒಬ್ಬ ನಾಯಕನಾಗಿ ಎಲ್ಲರಿಗೂ ಸ್ಪಂದಿಸಿದ್ದೇನೆ. ಚುನಾವಣೆ ಮತ್ತು ಕೋವಿಡ್‌-19 ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಹಲವಾರು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿಯಿಡಿ ಶ್ರಮಿಸಿದ್ದರಿಂದ ಬಹಳಷ್ಟು ಕೆಲಸಗಳು ಸುಸೂತ್ರವಾಗಿ ನಡೆದಿವೆ. ಕೋವಿಡ್‌-19 ವೈರಸ್‌ ವಿರುದ್ಧ ಹೋರಾಟದಲ್ಲಿ ಆರೋಗ್ಯ ಇಲಾಖೆ ವಿಶೇಷವಾಗಿ ಕೆಲಸ ಮಾಡಿದೆ. ಇಲಾಖೆ ತನ್ನೆಲ್ಲ ಸಿಬ್ಬಂದಿ ಜತೆಯಲ್ಲಿ ಹಗಲು ರಾತ್ರಿ ಶ್ರಮಿಸಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ರೈತ ಮುಖಂಡರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡು ಬಂದಿದ್ದೇವೆ. ರೈತರ ಬದುಕಿನಲ್ಲಿ ಒಂದು ಹೊಸತನ ತರಲಿಕ್ಕೆ ಬಹಳಷ್ಟು ಶ್ರಮಪಟ್ಟಿದ್ದಾಗಿ ಮತ್ತು ಜಿಲ್ಲೆಯ ರೈತರ ಬಹುತೇಕ ರೈತರ ಬೇಡಿಕೆ ತಾವು ಈಡೇರಿಸಿದ್ದಾಗಿ ಹೇಳಿದರು.

ಶಾಸಕ ಬಿ.ನಾರಾಯಣರಾವ್‌, ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್‌. ನಾಗೇಶ, ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ, ಭಂವರಸಿಂಗ್‌ ಮೀನಾ, ವಾರ್ತಾಧಿಕಾರಿ ಗವಿಸಿದ್ದಪ್ಪ ಮಾತನಾಡಿದರು. ಸಂಜೀವಕುಮಾರ ಜುಮ್ಮಾ, ಶಿವಶಂಕರ ಟೋಕರೆ ಡಾ| ಮಹಾದೇವ ಅವರ ಕಾರ್ಯವೈಖರಿ ಕುರಿತು ಕವನ ವಾಚಿಸಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇನ್ನಿತರ ಅಧಿಕಾರಿಗಳು ಇದ್ದರು. ಚನ್ನಬಸವ ಹೆಡೆ ನಿರೂಪಿಸಿದರು. ಡಿಯುಡಿಸಿ ಪಿ.ಡಿ. ಶರಣಬಸಪ್ಪ ಕೋಟಪ್ಪಗೋಳ ವಂದಿಸಿದರು.

ಜನ ಮೆಚ್ಚುವಂತೆ ಕೆಲಸ ಮಾಡುವೆ
ಬೀದರ ಜಿಲ್ಲೆಯ ಜನರು ಮೆಚ್ಚುವ ಹಾಗೆ ತಾವು ಜನಮನ ಅರಿತು ಕೆಲಸ ನಿರ್ವಹಿಸುತ್ತೇನೆ. ಒಂದು ತಂಡವಾಗಿ ಕಾರ್ಯನಿರ್ವಹಿಸಿದಾಗಲೇ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಅದಕ್ಕೆ ಎಲ್ಲ ಸಹದ್ಯೋಗಿಗಳ ಸಹಕಾರ ಕೂಡ ಮುಖ್ಯವಾಗಿರುತ್ತದೆ. ತಾವು ಜಿಲ್ಲೆಯಲ್ಲಿನ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯ ಜನರು ಮೆಚ್ಚುವ ಹಾಗೆ ಕಾರ್ಯ ಮಾಡುವೆ.
ಆರ್‌. ರಾಮಚಂದ್ರನ್‌,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next