ಹರಿಪ್ರಿಯಾ ಫುಲ್ ಖುಷಿಯ ಮೂಡ್‌ನಲ್ಲಿದ್ದಾರೆ. ಆ ಖುಷಿಗೆ ಕಾರಣ, “ಬಿಚ್ಚುಗತ್ತಿ’. ಹೌದು, ಹರಿಪ್ರಿಯಾ ಈ ಚಿತ್ರದಲ್ಲಿ ಸಿದ್ಧಾಂಬೆ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಆಗಿದ್ದು, “ಯು/ಎ’ ಪ್ರಮಾಣ ಪತ್ರವೂ ಸಿಕ್ಕಿದೆ. ಇನ್ನೇನು ಫೆಬ್ರವರಿಯಲ್ಲೇ ತೆರೆಗೆ ಬರಲು ತಯಾರಿ ನಡೆಸುತ್ತಿದೆ ಚಿತ್ರತಂಡ. ತಮ್ಮ “ಬಿಚ್ಚುಗತ್ತಿ’ಯಲ್ಲಿರುವ ಸಿದ್ಧಾಂಬೆ ಪಾತ್ರದ ಮೇಲೆ ಹರಿಪ್ರಿಯಾ ಸಿಕ್ಕಾಪಟ್ಟೆ ನಂಬಿಕೆ ಇಟ್ಟುಕೊಂಡಿದ್ದಾರೆ.
ಜನರಿಗೆ ಆ ಪಾತ್ರ ಖಂಡಿತ ಇಷ್ಟವಾಗುತ್ತೆ ಎಂಬ ಭರವಸೆಯೊಂದಿಗೆ, “ಬಿಚ್ಚುಗತ್ತಿ’ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಆ ಕುರಿತು ಅವರು ಹೇಳುವುದಿಷ್ಟು. “ಕಳೆದ ವರ್ಷ ನಾನು ಅಭಿನಯಿಸಿದ ಏಳು ಚಿತ್ರಗಳು ಬಿಡುಗಡೆಯಾಗಿದ್ದವು. ವಿಶೇಷವೆಂದರೆ, ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಪಾತ್ರ ಮಾಡಿಕೊಂಡು ಬಂದಿದ್ದೇನೆ. ಕೊನೆಯಲ್ಲಿ ಬಂದ ರೆಟ್ರೋ ಶೈಲಿಯ ಸಿನಿಮಾ ಸಕ್ಸಸ್ ಆಯ್ತು.
ಈ ವರ್ಷದ ಆರಂಭದಲ್ಲಿ 16 ನೇ ಶತಮಾನದ ಐತಿಹಾಸಿಕ ಚಿತ್ರ ಬರುತ್ತಿದೆ. “ಬಿಚ್ಚುಗತ್ತಿ’ ಚಿತ್ರದಲ್ಲಿ ನನ್ನದು ಡಬ್ಬಲ್ ರೋಲ್ ಏನಿಲ್ಲ. ಆದರೆ, ಎರಡು ಶೇಡ್ ಇರುವ ಪಾತ್ರವಿದೆ. ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಲುಕ್ ಹೊಸದಾಗಿದೆ. ಅದು ಬಿಟ್ಟರೆ, ಇಲ್ಲಿ ಕತ್ತಿ ಹಿಡಿದು ರಗಡ್ ಸಿದ್ಧಾಂಬೆಯಾಗಿಯೂ ಕಾಣಿಸಿಕೊಂಡಿದ್ದೇನೆ. ಆ ಪಾತ್ರ ಹೇಗೆಲ್ಲಾ ಇರುತ್ತೆ ಎಂಬುದಕ್ಕೆ ಸಿನಿಮಾ ನೋಡಬೇಕು. ನನಗೆ ಚಿತ್ರದುರ್ಗದ ಬಗ್ಗೆ ಗೊತ್ತಿದೆ.
ಅಲ್ಲಿನ ಕೋಟೆ, ಇತಿಹಾಸವೂ ಅಲ್ಪ-ಸ್ವಲ್ಪ ಗೊತ್ತು. ಹಲವು ಸಿನಿಮಾಗಳ ಸಾಂಗ್ ಚಿತ್ರೀಕರಣಕ್ಕೆ ಹೋಗಿದ್ದೇನೆ. ಇನ್ನು, ಬಿ.ಎಲ್.ವೇಣು ಅವರ ಕಾದಂಬರಿ ಆಧರಿತ ಚಿತ್ರ ಆಗಿದ್ದರಿಂದ ಎಕ್ಸೆ„ಟ್‌ಮೆಂಟ್ ಇದೆ. ಕಥೆ ಕೇಳಿದಾಗ ಥ್ರಿಲ್ ಆದೆ. ಸಿದ್ಧಾಂಬೆ ಪಾತ್ರ ಹೇಗೆಲ್ಲಾ ಮಾಡಬೇಕು ಅಂದುಕೊಂಡಿದ್ದೆನೋ, ಹಾಗೆಯೇ ಮೂಡಿಬಂದಿದೆ. ಆ ಸಿದ್ಧಾಂಬೆ ಪಾತ್ರ ಸಿನಿಮಾ ಮುಗಿಯುವ ಹೊತ್ತಿಗೆ ಜನರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಎಂಬುದೇ ಕುತೂಹಲ.
ಅಷ್ಟೊಂದು ಅದ್ಭುತವಾದ ಪಾತ್ರವದು. ನಾನು ಕುದುರೆ ಸವಾರಿ ಕಲಿತಿದ್ದೇನೆ. ಈ ಚಿತ್ರಕ್ಕಾಗಿಯೇ ಪುನಃ ಕುದುರೆ ಸವಾರಿ ಪಾಲಿಶ್ ಮಾಡಿಕೊಂಡೆ. ಅದು ಸಿನಿಮಾಗೆ ತುಂಬಾನೇ ಸಹಕಾರಿ ಆಯ್ತು. ಒಂದು ಖುಷಿಯ ವಿಷಯವೆಂದರೆ, ಸ್ಕೂಲ್‌ನಲ್ಲಿ ನಾನು ಹೆಚ್ಚು ಹಿಸ್ಟರಿ ಬಗ್ಗೆ ತಿಳಿಯಲಿಲ್ಲ. ಆದರೆ, ಸಿನಿಮಾಗಳ ಮೂಲಕ ಹಿಸ್ಟರಿ ಹೇಳಿಕೊಡುತ್ತಿದ್ದಾರೆ. ಪ್ರಾಕ್ಟಿಕಲಿ ನಾನು ಎಂಜಾಯ್ ಮಾಡುತ್ತಿದ್ದೇನೆ.
ಡಬ್ಬಿಂಗ್ ಮಾಡುವಾಗ, ವಿಷ್ಯುಯಲ್ಸ್ ನೋಡಿ, ಚಿತ್ರ ಅಷ್ಟೊಂದು ಚೆನ್ನಾಗಿ ಬಂದಿದೆ ಎನಿಸಿತು. ನಿಜಕ್ಕೂ “ಬಿಚ್ಚುಗತ್ತಿ’ ಹೊಸ ಹಿಸ್ಟರಿ ಕ್ರಿಯೇಟ್ ಮಾಡುತ್ತೆ’ ಎಂಬ ಭರವಸೆ ಇದೆ ಎನ್ನುತ್ತಾರೆ ಹರಿಪ್ರಿಯಾ. ಚಿತ್ರದಲ್ಲಿ ರಾಜ್‌ವರ್ಧನ್ ಭರಮಣ್ಣರಾಗಿ ಕಾಣಿಸಿಕೊಂಡಿದ್ದಾರೆ. “ಬಾಹುಬಲಿ’ ಖ್ಯಾತಿಯ ಪ್ರಭಾಕರ್ ದಳವಾಯಿ ಮುದ್ದಣ್ಣ ಪಾತ್ರ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ “ಸ್ಪರ್ಶ’ ರೇಖಾ, ಶಿವರಾಂ, ಶರತ್‌ಲೋಹಿತಾಶ್ವ,
“ಡಿಂಗ್ರಿ’ ನಾಗರಾಜ್, ರಮೇಶ್ ಪಂಡಿತ್, ಪ್ರಕಾಶ್ ಹೆಗ್ಗೊಡು, ಕಲ್ಯಾಣಿ, ಶ್ರೀನಿವಾಸಮೂರ್ತಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಈ “ಬಿಚ್ಚುಗತ್ತಿ’ ಚಿತ್ರವನ್ನು ನಿರ್ಮಿಸಿದೆ. ಹರಿ ಸಂತೋಷ್ ನಿರ್ದೇಶಕರಾಗಿದ್ದು, ನಕುಲ್ ಅಭ್ಯಂಖರ್ ಅವರ ಸಂಗೀತವಿದೆ. ಸೂರಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.