Advertisement

”ನನಗಿದು ಸ್ಪೆಷಲ್‌ ಸಿನಿಮಾ…”: ‘ಯದಾ ಯದಾ ಹೀ’ ಕುರಿತು ಹರಿಪ್ರಿಯಾ ಮಾತು

06:02 PM Jun 01, 2023 | Team Udayavani |

ಮದುವೆಯಾದ ಬಳಿಕ ಹರಿಪ್ರಿಯಾ ಮತ್ತೆ ಸಿನಿಮಾ ಮಾಡುತ್ತಾರಾ? ಹರಿಪ್ರಿಯಾ ಅವರ ಮುಂದಿನ ಸಿನಿಮಾ ಯಾವಾಗ? ಎಂದು ಕಾಯುತ್ತಿದ್ದ ಅಭಿಮಾನಿಗಳ ಮುಂದೆ, ಈ ವಾರ ಹರಿಪ್ರಿಯಾ ತಮ್ಮ ಪತಿ ಸಮೇತರಾಗಿ ದರ್ಶನ ಕೊಡುತ್ತಿದ್ದಾರೆ. ಹೌದು, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇದೇ ಮೊದಲ ಬಾರಿಗೆ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಒಟ್ಟಾಗಿ ಅಭಿನಯಿಸಿರುವ “ಯದಾ ಯದಾ ಹೀ’ ಇದೇ ಜೂನ್‌ 2ರಂದು ತೆರೆ ಕಾಣುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ಹರಿಪ್ರಿಯಾ, ಬಿಡುಗಡೆಯಾಗುತ್ತಿರುವ ತಮ್ಮ ಹೊಸ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

Advertisement

ಸಿಂಹಪ್ರಿಯಾ ಆದ ನಂತರ ಪ್ರೇಕ್ಷಕರ ಮುಂದೆ ಬರುತ್ತಿರುವುದು ಹೇಗಿದೆ?

ಮದುವೆಯಾದ ನಂತರ ನಾನು ಮತ್ತು ವಸಿಷ್ಠ ಇಬ್ಬರೂ ಒಟ್ಟಾಗಿ ಅಭಿನಯಿಸಿದ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ನಿಜ ಹೇಳಬೇಕು ಅಂದ್ರೆ, ನನ್ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಸ್ವಲ್ಪ ಹೆಚ್ಚಾಗಿಯೇ ಖುಷಿ, ಎಕ್ಸೈಟ್‌ಮೆಂಟ್‌ ಎಲ್ಲವೂ ಇದೆ. ಸ್ವಲ್ಪ ಗ್ಯಾಪ್‌ ನಂತರ ಆಡಿಯನ್ಸ್‌ ಮುಂದೆ ಮತ್ತೆ ಬರುತ್ತಿರುವುದು ಖುಷಿ ಕೊಡುತ್ತಿದೆ.

“ಯದಾ ಯದಾ ಹೀ’ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ಈ ಸಿನಿಮಾದಲ್ಲಿ ನಾನೊಬ್ಬಳು ಬಿಝಿನೆಸ್‌ ವುಮೆನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾದ ಕಥೆ ನನ್ನ ಪಾತ್ರದ ಸುತ್ತ ನಡೆಯುತ್ತದೆ. ಒಬ್ಬ ಮಹಿಳೆ ತನಗೆ ಕಷ್ಟಕರವಾಗಿರುವಂಥ ಪರಿಸ್ಥಿತಿಯನ್ನೂ ಹೇಗೆ ಚಾಲೆಂಜ್‌ ಆಗಿ ತೆಗೆದುಕೊಂಡು, ಎದುರಿಸುತ್ತಾಳೆ ಅನ್ನೋದು ನನ್ನ ಪಾತ್ರ. ಕೆಲವೊಮ್ಮೆ ಬುದ್ಧಿವಂತೆಯಾಗಿ, ಕೆಲವೊಮ್ಮೆ ಅಯ್ಯೋಪಾಪ ಎನಿಸುವಂಥ, ಕೆಲವೊಮ್ಮೆ ಕ್ರೂರಿಯಂಥೆ ಆಡಿಯನ್ಸ್‌ಗೆ ಅನಿಸಬಹುದು. ಅಂಥ ಒಂದಷ್ಟು ವಿವಿಧ ಆಯಾಮಗಳಿರುವ ಪಾತ್ರ ಇದಾಗಿದೆ.

Advertisement

ಪಾತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?

“ಯದಾ ಯದಾ ಹೀ’ ಎಲ್ಲ ಥರದ ಎಮೋಶನ್ಸ್‌ ಇರುವಂಥ ಸಿನಿಮಾ. ಅದರಲ್ಲೂ ನನ್ನ ಪಾತ್ರಕ್ಕಂತೂ ತುಂಬ ಆಯಾಮಗಳಿವೆ. ನಾನು ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ಈ ಥರದ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ನಿಜ ಹೇಳಬೇಕು ಅಂದ್ರೆ, ಈ ಸಿನಿಮಾದಲ್ಲಿ ಮಾಡಿರುವ ಒಂದೇ ಪಾತ್ರ, ನಾಲ್ಕೈದು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ ಅನುಭವ ಕೊಟ್ಟಿದೆ. ಎಲ್ಲರಿಗೂ ಒಂದೇ ಸಿನಿಮಾದಲ್ಲಿ ಈ ಥರದ ಪಾತ್ರಗಳು ಸಿಗೋದು ವಿರಳ. ಒಟ್ಟಿನಲ್ಲಿ ತುಂಬ ಖುಷಿಕೊಟ್ಟ ಪಾತ್ರವನ್ನು ಅಷ್ಟೇ ಖುಷಿಯಾಗಿ ಮಾಡಿದ್ದೇನೆ

“ಯದಾ ಯದಾ ಹೀ’ ಅಂದ್ರೇನು, ಇದೇ ಟೈಟಲ್‌ ಯಾಕೆ?

ಇದೊಂದು ತುಂಬ ಪವರ್‌ಫ‌ುಲ್‌ ಸಬ್ಜೆಕ್ಟ್ ಮತ್ತು ಅಷ್ಟೇ ಬ್ರಿಲಿಯೆಂಟ್‌ ಸ್ಕ್ರಿಪ್ಟ್ ಸಿನಿಮಾ. ಇಲ್ಲಿ ಸಸ್ಪೆನ್ಸ್‌, ಥ್ರಿಲ್ಲಿಂಗ್‌, ಎಮೋಶನ್ಸ್‌ ಎಲ್ಲವೂ ಇದೆ. ಶೋಷಣೆ ಅಂದ್ರೆ ಕೇವಲ ಹೆಣ್ಣಿಗೆ ಮಾತ್ರವಲ್ಲ, ಅದು ಗಂಡಿಗೂ ಆಗಬಹುದು. ಶೋಷಣೆಗೆ ಲಿಂಗ

ಭೇದ-ತಾರತಮ್ಯ ಅಂಥ ಇರುವುದಿಲ್ಲ. ಇಲ್ಲೂ ಅಂಥದ್ದೇ, ನಮ್ಮ ನಡುವೆಯೇ ನಡೆಯುವ ಅನೇಕ ವಿಷಯಗಳಿವೆ. ಸಿನಿಮಾದ ಸಬ್ಜೆಕ್ಟ್ ತುಂಬ ಪವರ್‌ಫ‌ುಲ್‌ ಆಗಿದ್ದರಿಂದ, ಅದಕ್ಕೆ ತಕ್ಕಂತ ಪವರ್‌ಫ‌ುಲ್‌ ಟೈಟಲ್‌ ಬೇಕಾಗಿತ್ತು. ಆಗ ವಸಿಷ್ಠ ಅವರೇ ಈ ಟೈಟಲ್‌ನ ಸಜೆಸ್ಟ್‌ ಮಾಡಿದ್ರು. ಕೊನೆಗೆ ಇಡೀ ಟೀಮ್‌ಗೆ ಕೂಡ ಒಪ್ಪಿಗೆಯಾಗಿ ಇದೇ ಟೈಟಲ್‌ ಫೈನಲ್‌.

ಸಿನಿಮಾದಲ್ಲಿ ನೀವು, ವಸಿಷ್ಠ ಸಿಂಹ, ದಿಗಂತ್‌ ಕಾಂಬಿನೇಶನ್‌ ಹೇಗಿದೆ?

ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾವಾಗಿದ್ದರಿಂದ, ಇಲ್ಲಿ ಬರುವ ಪಾತ್ರಗಳು ಮತ್ತು ಅವುಗಳ ನಡುವಿನ ಸಂಬಂಧದ ಬಗ್ಗೆ ಈಗಲೇ ಹೆಚ್ಚೇಳು ಹೇಳಲಾರೆ. ಇಲ್ಲಿ ಪ್ರಮುಖವಾಗಿ ನಾನು, ವಸಿಷ್ಠ ಮತ್ತು ದಿಗಂತ್‌ ಮೂವರ ಪಾತ್ರಗಳ ನಡುವೆ ಇಡೀ ಸಿನಿಮಾ ಸಾಗುತ್ತದೆ. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂಥ ಆಡಿಯನ್ಸ್‌ ಯೋಚನೆ ಮಾಡುವಂತೆ ಮಾಡುತ್ತ ಸಿನಿಮಾ ಟ್ರಾವೆಲ್‌ ಆಗುತ್ತದೆ.

ಸಿನಿಮಾದಲ್ಲಿ ನೀವು ಮರೆಯಲಾಗದ ವಿಷಯಗಳು ಏನಾದ್ರೂ ಇವೆಯಾ?

ಖಂಡಿತಾ, ಮರೆಯಲಾಗದಂಥ ಒಂದಷ್ಟು ವಿಷಯಗಳು ಈ ಸಿನಿಮಾದಲ್ಲಿವೆ. ಈ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ನಾನು, ವಸಿಷ್ಠ ಇಬ್ಬರೂ ಪ್ರೀತಿಸುತ್ತಿದ್ದೆವು. ಈ ವಿಷಯ ಚಿತ್ರತಂಡದವರಿಗೂ ಗೊತ್ತಿರಲಿಲ್ಲ! ನಮ್ಮ ಪ್ರೀತಿ ಶುರುವಾದ ನಂತರ ನಾವಿಬ್ಬರೂ ಒಟ್ಟಿಗೆ ನಟಿಸಿದ ಮೊದಲ ಸಿನಿಮಾ ಇದು. ಇನ್ನು ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಂದು ಹಾಡಿಗೆ ನಾನು ಧ್ವನಿಯಾಗಿದ್ದೇನೆ. ನಟಿಯಾಗಿದ್ದವಳು ಈ ಸಿನಿಮಾದ ಮೂಲಕ ಸಿಂಗಲ್‌ ಕೂಡ ಆಗಿದ್ದೇನೆ. ಹೀಗೆ ಮರೆಯಲಾಗದ ಒಂದಷ್ಟು ವಿಷಯಗಳಿವೆ.

ಅಂತಿಮವಾಗಿ ನಿಮ್ಮ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಏನಂತೀರಾ?

ನಾವಿಬ್ಬರೂ ಮದುವೆಯಾದ ನಂತರ ಅಭಿಮಾನಿಗಳು, ನಿಮ್ಮ ಸಿನಿಮಾ ಯಾವಾಗ? ನಿಮ್ಮಿಬ್ಬರನ್ನೂ ಒಟ್ಟಾಗಿ ಸ್ಕ್ರೀನ್‌ ಮೇಲೆ ನೋಡಬೇಕು ಎಂದು ಹೇಳುತ್ತಿದ್ದರು. ಇನ್ನು ನಾನು ಕೂಡ ಆಡಿಯನ್ಸ್‌ನ ಮಿಸ್‌ ಮಾಡಿಕೊಂಡಿದ್ದೆ. ಈಗ “ಯದ ಯದಾ ಹೀ’ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು, ವಸಿಷ್ಠ ಇಬ್ಬರೂ ಜೊತೆಯಾಗಿ ಅಭಿನಯಿಸಿದ್ದೇವೆ. ತೆರೆಮೇಲೆ ನಮ್ಮನ್ನು ನೋಡಲು ಕಾದಿರುವವರಿಗೆ ಮತ್ತು ನಾವು ನೋಡಲು ಕಾದಿರುವವರನ್ನು ಈ ಸಿನಿಮಾ ಮತ್ತೂಮ್ಮೆ ಒಂದಾಗಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next