ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗ ಸದ್ಯ ವಿಶ್ವ ಮಾನ್ಯತೆ ಪಡೆದಿದೆ. ಅದರಲ್ಲೂ ವೇಗದ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಸೇರಿದಂತೆ ಸದ್ಯದ ಸ್ಪೀಡ್ ಬೌಲಿಂಗ್ ಟೀಂ ಹಲವಾರು ಪ್ರಮುಖ ಪಂದ್ಯಗಳನ್ನು ಭಾರತ ತಂಡಕ್ಕೆ ಗೆಲ್ಲಿಸಿ ಕೊಟ್ಟಿದೆ. ಆದರೆ ಎಲ್ಲಾ ಆಟಗಾರರಿಗಿಂತ ವಿಭಿನ್ನವಾಗಿ ನಿಲ್ಲುವುದು ಭುವನೇಶ್ವರ್ ಕುಮಾರ್. ಶಾಂತ ಸ್ವಭಾವದ, ಯಾವುದೇ ಅತಿರೇಕವಿಲ್ಲದ ಭುವನೇಶ್ವರ್ ಕುಮಾರ್ ತನ್ನ ಸ್ವಭಾವದಿಂದಲೇ ಹೆಚ್ಚು ಗಮನ ಸೆಳೆದವರು. ಇಂತಹ ಭುವನೇಶ್ವರ್ ಕುಮಾರ್ ಲವ್ ಸ್ಟೋರಿ ಅಷ್ಟೇ ವಿಶೇಷವಾಗಿದೆ.
ಭುವನೇಶ್ವರ್ ಕುಮಾರ್ ಅವರು ನುಪೂರ್ ನಗರ್ ಅವರನ್ನು 2017ರಲ್ಲಿ ವಿವಾಹವಾದರು. ಆದರೆ ಅವರಿಬ್ಬರ ಪ್ರೀತಿ ದಶಕಗಳ ಹಿಂದಿನಿಂದ ನಡೆದುಕೊಂಡು ಬಂದಿತ್ತು. ಭುವಿ ಮತ್ತು ನುಪೂರ್ ಬಾಲ್ಯ ಸ್ನೇಹಿತರು. ಮೇಲಾಗಿ ಒಂದೇ ವಠಾರದವರು. ವಠಾರದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಭುವಿ ಆ ಸಮಯದಲ್ಲೇ ನುಪೂರ್ ಕಡೆಗೆ ಪ್ರೇಮ ಬಾಣ ಹೂಡಿದ್ದರು. ನಾಚಿಕೆಯ ಸ್ವಭಾವದ ಭುವಿ ಆ ದಿನಗಳಲ್ಲಿ ಮಾತ್ರ ತನ್ನ ಪ್ರೀತಿ ದಕ್ಕಿಸಿಕೊಳ್ಳಲು ಹಲವು ಸರ್ಕಸ್ ಮಾಡಿದ್ದರು. ಕಾಲೋನಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭುವಿ ನೇರವಾಗಿ ನುಪೂರ್ ಮನೆಯ ಕಡೆಗೆ ಗುರಿಯಿಟ್ಟು ಸಿಕ್ಸರ್ ಬಾರಿಸುತ್ತಿದ್ದರು. ಈ ವಿಧಾನ ಕೊನೆಗೂ ಯಶಸ್ವಿಯಾಯಿತು ಎನ್ನುವುದೇ ವಿಶೇಷ.
ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಕೂಡಾ ದೊಡ್ಡ ಸವಾಲಿನ ಕೆಲಸವೇ. ಈ ಸಮಯದಲ್ಲಿ ಎಷ್ಟೇ ಧೈರ್ಯಶಾಲಿ ಹುಡುಗರೂ ಕೂಡಾ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟು ಕೊಂಡವರಂತೆ ಆಡುತ್ತಾರೆ. ಪ್ರಪೋಸಲ್ ಪರೀಕ್ಷೆಯಲ್ಲಿ ಪಾಸಾದರೆ ಸರಿ, ಇಲ್ಲವಾದರೆ ಏನು ಮಾಡುವುದು ಎಂಬ ಚಿಂತೆಯೇ ಇದಕ್ಕೆ ಕಾರಣ. ಆದರೆ ಭುವನೇಶ್ವರ್ ಕುಮಾರ್ ಅವರು ನುಪೂರ್ ಗೆ ಮೂರು ಬಾರಿ ಪ್ರಪೋಸ್ ಮಾಡಿದ್ದರಂತೆ. ಮೊದಲು ಮೆಸೇಜ್ ಮಾಡಿದ್ದ ಭುವಿ ಕೂಡಲೇ ಫೋನ್ ಮಾಡಿದ್ದರು. ನಂತರ ಮುಖಃತ ಭೇಟಿಯಾದಾಗಲೂ ಭುವನೇಶ್ವರ್ ಕುಮಾರ್ ತನ್ನ ಮನದನ್ನೆಗೆ ಹೃದಯದ ಮಾತುಗಳನ್ನು ಹೇಳಿದ್ದ. ಭುವಿಯನ್ನು ಪ್ರೀತಿಸುತ್ತಿದ್ದ ನೂಪುರ್ ತಡ ಮಾಡದೆ ಒಪ್ಪಿಗೆ ನೀಡಿದ್ದರು.
ಬಹುತೇಕರಂತೆ ಭುವಿ-ನುಪೂರ್ ಪ್ರೀತಿ ಕಥೆ ಕೂಡಾ ಹಲವಾರು ಎಡರು ತೊಡರುಗಳನ್ನು ಅನುಭವಿಸಬೇಕಾಗಿತ್ತು. ಇವರ ಪ್ರೀತಿ ಪ್ರೇಮದ ಬಗ್ಗೆ ಇಬ್ಬರ ಮನೆಯಲ್ಲೂ ಮಾಹಿತಿ ಇರಲಿಲ್ಲ. ಭುವನೇಶ್ವರ್ ಕುಮಾರ್ ಆಗಿನ್ನೂ ರಣಜಿ ಕ್ರಿಕೆಟ್ ಆಡುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಇನ್ನೂ ಅವಕಾಶ ಲಭಿಸಿರಲಿಲ್ಲ. ಆದರೆ ಇತ್ತ ನುಪೂರ್ ನಗರ್ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೂ ಸೇರಿದ್ದರು. ಆದರೆ ಭುವಿ ಭವಿಷ್ಯದ ಬಗ್ಗೆ ನುಪೂರ್ ಗೆ ಚಿಂತೆ ಹತ್ತಿತ್ತು. ಭುವಿ ಲೈಫ್ ನಲ್ಲಿ ಸೆಟಲ್ ಆಗದಿದ್ದರೆ ಮನೆಯಲ್ಲಿ ಮದುವೆ ಮಾತುಕತೆಗೆ ಹಿನ್ನಡೆಯಾಗುತ್ತದೆ ಎಂಬ ಚಿಂತೆ ಕಾಡಿತ್ತು. ಆದರೆ ಭುವಿ ಮಾತ್ರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವತ್ತ ಹೆಚ್ಚಿನ ಪರಿಶ್ರಮ ಪಡುತ್ತಿದ್ದರು. ಮನೆಯಲ್ಲಿ ಪ್ರಸ್ತಾಪ ಮಾಡುವ ಮೊದಲು ಸ್ವತಃ ನುಪೂರ್ ಅವರೇ ಭುವನೇಶ್ವರ್ ಕುಮಾರ್ ಅವರ ಇಂಟರ್ವ್ಯೂ ಮಾಡಿದ್ದರು. ಮನೆಯಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದನ್ನು ನುಪೂರ್ ಹೇಳಿಕೊಟ್ಟಿದ್ದರು.
2012ರಲ್ಲಿ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಪಾಕಿಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲೇ ಭುವನೇಶ್ವರ್ ಕುಮಾರ್ ತನ್ನ ಸ್ವಿಂಗ್ ಬೌಲಿಂಗ್ ನಿಂದ ಮಿಂಚು ಹರಿಸಿದ್ದರು. ಹಿರಿಯ ಬೌಲರ್ ಗಳ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತನ್ನ ಅದ್ಭುತ ಪ್ರದರ್ಶನದಿಂದ ಕೆಲವೇ ಕೆಲವು ಪಂದ್ಯಗಳಲ್ಲೇ ತಂಡದಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡರು. ಭಾರತ ತಂಡದ ಪ್ರಮುಖ ಬೌಲರ್ ಆಗಿ ಮೂರು ಮಾದರಿಯಲ್ಲೂ ಭುವಿ ಮಿಂಚು ಹರಿಸಿದರು.
2012ರಲ್ಲಿ ಭುವಿ ಪದಾರ್ಪಣೆ ಪಂದ್ಯ ಆಡುವಾಗ ನುಪೂರ್ ಹಾಸ್ಟೆಲ್ ನಲ್ಲಿ ಕುಳಿತು ತನ್ನ ಪ್ರಿಯಕರನ ಮೊದಲ ಪಂದ್ಯವನ್ನು ನೋಡಿದ್ದರು. ಭಾರತ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಮೊದಲ ಬಾರಿಗೆ ನೋಡಿದಾಗ, ಭುವಿಯನ್ನು ಅವರ ಇಡೀ ಕುಟುಂಬದಲ್ಲಿ ಏಕೆ ಅತ್ಯಂತ ಪ್ರತಿಭಾವಂತ ಎಂದು ಪರಿಗಣಿಸಲಾಗಿದೆ ಎಂದು ತಾನು ಅರಿತುಕೊಂಡೆ ಎನ್ನುತ್ತಾರೆ ನುಪೂರ್.
ಭುವನೇಶ್ವರ್ ಕುಮಾರ್ ತನ್ನ ಮನೆಯಲ್ಲಿ ತನ್ನ ಮತ್ತು ನುಪೂರ್ ಪ್ರೀತಿ ವಿಚಾರ ಹೇಳಿರಲಿಲ್ಲ. ಆದರೆ ಬೇರೆ ಯಾರದೋ ಮೂಲಕ ಮನೆಯವರಿಗೆ ಈ ವಿಚಾರ ಗೊತ್ತಾಗಿತ್ತು. ಮಗನ ಪ್ರೀತಿಯ ಬಗ್ಗೆ ಮಗನಿಂದಲೇ ಹೆಚ್ಚಿನ ಮಾಹಿತಿ ಪಡೆದ ಮನೆಯವರು ತಮ್ಮ ಒಪ್ಪಿಗೆ ಸೂಚಿಸಿದ್ದರು. ಎಲ್ಲವೂ ಸುಸೂತ್ರವಾಯಿತು ಎಂದುಕೊಳ್ಳುವಾಗಲೇ ಎದುರಾಗಿತ್ತು ವಿಘ್ನ! ಅದುವೇ ನುಪೂರ್ ಮನೆಯಲ್ಲಿ ವಿರೋಧ. ಭುವಿ ಕ್ರಿಕೆಟ್ ಭವಿಷ್ಯದ ಕುರಿತು ಅಸಮಾಧಾನ ಹೊಂದಿದ್ದ ನುಪೂರ್ ಮನೆಯವರು ಮೊದಲು ಒಪ್ಪಿಕೊಂಡಿರಲಿಲ್ಲ. ಆದರೆ ಇದೆಲ್ಲವನ್ನೂ ನಾಜೂಕಾಗಿ ನಿಭಾಯಿಸಿದ ನುಪೂರ್ ಸಮ್ಮತಿ ಪಡೆದಿದ್ದರು.
ಹೀಗೆ 2017ರಲ್ಲಿ ಉತ್ತರ ಪ್ರದೇಶದಲ್ಲಿ ಭುವನೇಶ್ವರ್ ಕುಮಾರ್- ನುಪೂರ್ ವಿವಾಹ ಬಂಧನಕ್ಕೆ ಒಳಗಾದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಸೇರಿ ಹಲವಾರು ಕ್ರಿಕೆಟಿಗರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೀರ್ತನ್ ಶೆಟ್ಟಿ ಬೋಳ