Advertisement

1ನೇ ಟಿ20: ಭುವಿ ಪಂಚ್‌ಗೆ ತತ್ತರಿಸಿದ ಆಫ್ರಿಕಾ

06:00 AM Feb 19, 2018 | Team Udayavani |

ಜೋಹಾನ್ಸ್‌ಬರ್ಗ್‌: ಭುವನೇಶ್ವರ್‌ ಕುಮಾರ್‌ (24ಕ್ಕೆ5) ವಿಕೆಟ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 28 ರನ್‌ ಗೆಲುವು ಸಾಧಿಸಿದೆ. ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

Advertisement

ಟೆಸ್ಟ್‌, ಏಕದಿನ ಸರಣಿಯಲ್ಲಿ ಸೋಲುಂಡಿರುವ ದಕ್ಷಿಣ ಆಫ್ರಿಕಾ ತವರಿನಲ್ಲಿ ಮತ್ತೂಂದು ಮುಖಭಂಗ ಎದುರಿಸಿತು. ಅಷ್ಟೇ ಅಲ್ಲ ಟಿ20 ಕೂಟವನ್ನೂ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದೆ. ಎಬಿಡಿ ವಿಲಿಯರ್, ಡುಪ್ಲೆಸಿಸ್‌ ಸೇರಿದಂತೆ ಅಗ್ರ ಬ್ಯಾಟ್ಸ್‌ಮನ್‌ಗಳು ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಆಫ್ರಿಕಾ ಭಾರತ ನೀಡಿದ 203 ರನ್‌ ಸವಾಲನ್ನು ಬೆನ್ನಟ್ಟಲು ವಿಫ‌ಲವಾಯಿತು. 175 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು.

ಆಫ್ರಿಕನ್ನರ ಪೆವಿಲಿಯನ್‌ ಪರೇಡ್‌: ಭಾರತ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಹೆಂಡ್ರಿಕ್ಸ್‌ (70 ರನ್‌)ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಆಟ ಸಾಗಲಿಲ್ಲ. ನಾಯಕ ಡುಮಿನಿ (3 ರನ್‌), ಡೇವಿಡ್‌ ಮಿಲ್ಲರ್‌ (9 ರನ್‌) ಬೇಗ ಔಟಾದರು. ಆದರೆ ಬೆಹ್ರುದ್ದೀನ್‌ (33 ರನ್‌) ಕೊಂಚ ಹೋರಾಟ ನೀಡಿದರಾದರೂ ಚಹಲ್‌ ಎಸೆತದಲ್ಲಿ ಔಟಾದರು. ಅಲ್ಲಿಂದ ನಂತರ ಪಂದ್ಯ ಭಾರತದ ಕೈವಶವಾಗುವತ್ತ ಸಾಗಿತು.

ಶಿಖರ್‌ ಧವನ್‌ ಬಿರುಸಿನ ಆಟ: ಭಾರತದ ಸ್ಕೋರ್‌ ಇನ್ನೂರರ ಗಡಿ ದಾಟುವಲ್ಲಿ ಎಡಗೈ ಆರಂಭಕಾರ ಶಿಖರ್‌ ಧವನ್‌ ಪಾಲು ಮಹತ್ವದ್ದಾಗಿತ್ತು. 15ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡು ಲೀಲಾಜಾಲವಾಗಿ ಬ್ಯಾಟ್‌ ಬೀಸತೊಡಗಿದ ಧವನ್‌ ಕೇವಲ 39 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಈ ಆಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ 4ನೇ ಅರ್ಧ ಶತಕವಾಗಿದೆ. ಧವನ್‌ ಆವರ ಅರ್ಧ ಶತಕ 27 ಎಸೆತಗಳಲ್ಲಿ ಪೂರ್ತಿಗೊಂಡಿತ್ತು.

ಭಾರತದ ಆರಂಭ ಅತ್ಯಂತ ಬಿರುಸಿನಿಂದ ಕೂಡಿತ್ತು. ಪ್ಯಾಟರ್ಸನ್‌ ಅವರ ಮೊದಲ ಓವರಿನಲ್ಲೇ ಸಿಡಿದು ನಿಂತ ರೋಹಿತ್‌ ಶರ್ಮ 2 ಸಿಕ್ಸರ್‌, ಒಂದು ಬೌಂಡರಿ ಸಹಿತ 18 ರನ್‌ ಬಾರಿಸಿ ಅಪಾಯದ ಸೂಚನೆಯಿತ್ತರು. ಆದರೆ ಇದೇ ರಭಸವನ್ನು ಮುಂದುವರಿಸಿಕೊಂಡು ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ದ್ವಿತೀಯ ಓವರ್‌ ಎಸೆದ ಜೂನಿಯರ್‌ ಡಾಲ, ಕೀಪರ್‌ ಕ್ಲಾಸೆನ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ರೋಹಿತ್‌ ಆಟಕ್ಕೆ ತೆರೆ ಎಳೆದರು. ವಿಶೇಷವೆಂದರೆ, ಇದು ಕ್ಲಾಸೆನ್‌ ಮತ್ತು ಡಾಲ ಇಬ್ಬರ ಪಾಲಿಗೂ ಪಾದಾರ್ಪಣಾ ಪಂದ್ಯವಾಗಿತ್ತು. ರೋಹಿತ್‌ ಗಳಿಕೆ 9 ಎಸೆತಗಳಿಂದ 21 ರನ್‌ (2 ಬೌಂಡರಿ, 2 ಸಿಕ್ಸರ್‌).

Advertisement

ಸುರೇಶ್‌ ರೈನಾ ವಿಫ‌ಲ: ಬಹಳ ಸಮಯದ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡ ಎಡಗೈ ಆಟಗಾರ ಸುರೇಶ್‌ ರೈನಾ 2ನೇ ಕ್ರಮಾಂಕದಲ್ಲಿ ಇಳಿದು  15 ರನ್‌ ಮಾಡಿದರು (7 ಎಸೆತ, 2 ಬೌಂಡರಿ, 1 ಸಿಕ್ಸರ್‌). ಈ ವಿಕೆಟ್‌ ಕೂಡ ಡಾಲ ಪಾಲಾಯಿತು. ಪುಲ್‌ ಮಾಡುವ ಪ್ರಯತ್ನದಲ್ಲಿ ರೈನಾ ಎಡವಿದರು. ಆಕಾಶಕ್ಕೆ ನೆಗೆದ ಚೆಂಡು ನೇರವಾಗಿ ಡಾಲ ಕೈಗೆ ಬಂದು ಬಿತ್ತು. ಇದಕ್ಕೂ ಮುನ್ನ 7 ರನ್‌ ಮಾಡಿದ್ದ ವೇಳೆ ಮಿಡ್‌ ಆಫ್ನಲ್ಲಿದ್ದ ಬೆಹದೀìನ್‌ ಅವರಿಂದ ರೈನಾ ಜೀವದಾನ ಪಡೆದಿದ್ದರು. ಧವನ್‌-ರೈನಾ 13 ಎಸೆತಗಳಲ್ಲಿ 26 ರನ್‌ ಪೇರಿಸಿದರು. ಪವರ್‌-ಪ್ಲೇ ಅವಧಿಯಲ್ಲಿ ಭಾರತ 2 ವಿಕೆಟಿಗೆ 78 ರನ್‌ ರಾಶಿ ಹಾಕಿತು.

ಧವನ್‌-ಕೊಹ್ಲಿ ಜತೆಗೂಡಿದೊಡನೆ ಭಾರತದ ಬ್ಯಾಟಿಂಗ್‌ ಮತ್ತಷ್ಟು ಬಿರುಸು ಪಡೆದುಕೊಂಡಿತು. ಇವರಿಬ್ಬರು ಕೇವಲ 25 ಎಸೆತಗಳಿಂದ 50 ರನ್‌ ಪೂರ್ತಿಗೊಳಿಸಿ, 3ನೇ ವಿಕೆಟಿಗೆ 59 ರನ್‌ ರಾಶಿ ಹಾಕಿದರು. ಹೀಗಾಗಿ ಭಾರತದ 100 ರನ್‌ ಕೇವಲ 8.2 ಓವರ್‌ಗಳಲ್ಲಿ ಬಂತು. ಕೊಹ್ಲಿ 20 ಎಸೆತಗಳಿಂದ 26 ರನ್‌ ಶಂಸಿಗೆ ಎಲ್‌ಬಿ ಆದರು. ಈ ಡಿಆರ್‌ಎಸ್‌ ತೀರ್ಪು ಬೌಲರ್‌ ಪರವಾಗಿ ಬಂತು.

ಕೊಹ್ಲಿ ನಿರ್ಗಮನದ ಬಳಿಕ ಮನೀಷ್‌ ಪಾಂಡೆ ಜತೆಗೂಡಿ ಇನ್ನಿಂಗ್ಸ್‌ ಬೆಳೆಸಿದ ಧವನ್‌ 4ನೇ ವಿಕೆಟಿಗೆ 47 ರನ್‌ ಪೇರಿಸಿದರು. ಉಳಿದವರಿಗೆ ಹೋಲಿಸಿದರೆ ಪಾಂಡೆ ಆಟ ತುಸು ನಿಧಾನ ಗತಿಯಿಂದ ಕೂಡಿತ್ತು. ಅಜೇಯ 29 ರನ್ನಿಗೆ 27 ಎಸೆತ ಎದುರಿಸಿದರು. ಇದರಲ್ಲಿ ಒಂದೇ ಸಿಕ್ಸರ್‌ ಮಾತ್ರ ಇತ್ತು. ಧವನ್‌ 15ನೇ ಓವರಿನಲ್ಲಿ ಔಟಾದ ಬಳಿಕ ಆಗಮಿಸಿದ ಧೋನಿ 11 ಎಸೆತ ಎದುರಿಸಿ 16 ರನ್‌ ಮಾಡಿದರೆ (2 ಬೌಂಡರಿ), ಹಾರ್ದಿಕ್‌ ಪಾಂಡ್ಯ 7 ಎಸೆತಗಳಿಂದ 13 ರನ್‌ ಮಾಡಿ ಔಟಾಗದೆ ಉಳಿದರು (2 ಬೌಂಡರಿ).

Advertisement

Udayavani is now on Telegram. Click here to join our channel and stay updated with the latest news.

Next