ನವದೆಹಲಿ: ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ಅವರು ಸನ್‌ರೈಸರ್ ಹೈದರಾಬಾದ್ ತಂಡದ ಆರಂಭಿಕ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ನಾಯಕ ಐಡೆನ್ ಮಾರ್ಕ್ರಮ್ ಅವರು ದಕ್ಷಿಣ ಆಫ್ರಿಕಾ ಪರ ಕರ್ತವ್ಯ ನಿರ್ವಹಿಸುವ ಸಲುವಾಗಿ ಈ ಬದಲಾವಣೆ ಮಾಡಲಾಗಿದೆ. ಹೈದರಾಬಾದ್ ತಂಡವು ತನ್ನ ಆರಂಭಿಕ ಪಂದ್ಯವನ್ನು ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್‌ನಲ್ಲಿ ಆಡಲಿದೆ.
ನೆದರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಏಕದಿನ ಸರಣಿಗಾಗಿ ಮಾರ್ಕ್ರಮ್ ಅವರು ದಕ್ಷಿಣ ಆಫ್ರಿಕಾದಲ್ಲಿ ಇರಲಿದ್ದಾರೆ.
ಅವರು ಏ.3ರಂದು ಭಾರತಕ್ಕೆ ಆಗಮಿಸಲಿದ್ದಾರೆ. ದಕ್ಷಿಣ ಆಫ್ರಿಕಾದ ಪಂದ್ಯಗಳು ಮಾ.31 ಮತ್ತು ಏ.2ರಂದು ನಡೆಯಲಿದೆ. ಈ ಸರಣಿ ಮುಂಬರುವ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ನೇರ ಪ್ರವೇಶಗೈಯಲು ಅತ್ಯಂತ ಪ್ರಮುಖವೆಂದು ಭಾವಿಸಲಾಗಿದೆ.
33ರ ಹರೆಯದ ಭುವನೇಶ್ವರ್ 2013ರಿಂದ ಸನ್‌ರೈಸರ್ ತಂಡದ ಪರ ಆಡುತ್ತಿದ್ದಾರೆ. ಅವರು ಈ ಹಿಂದೆ 2019ರಲ್ಲಿ ಆರು ಮತ್ತು 2022ರಲ್ಲಿ ಒಮ್ಮೆ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಹೈದರಾಬಾದ್ ಎರಡು ಬಾರಿ ಜಯ ಗಳಿಸಿದ್ದರೆ ಇನ್ನುಳಿದ ಐದು ಬಾರಿ ಸೋಲನ್ನು ಕಂಡಿತ್ತು. ಹೈದರಾಬಾದ್ ತಂಡದ ದ್ವಿತೀಯ ಪಂದ್ಯವು ಏ.7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಮಾರ್ಕ್ರಮ್ ಆಡುವ ಸಾಧ್ಯತೆಯಿದೆ.