Advertisement

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

07:19 PM Jun 25, 2021 | Team Udayavani |

ಕೋವಿಡ್ ಸಂದರ್ಭದಲ್ಲಿ ದೇಶದ ನಾಗರಿಕ ವ್ಯವಸ್ಥೆಯೇ ಅಡಿಮೇಲಾಗಿದೆ. ಉದ್ಯಮ ಕ್ಷೇತ್ರಗಳು ನೆಲಕಚ್ಚಿ ಹೋಗಿವೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಮೊದಲ ಅಲೆಯಲ್ಲಿ ಕಾಣದ ಸಂಕಷ್ಟ ಈ ಎರಡನೇ ಅಲೆಯಲ್ಲಿ ಜನ ಕಂಡಿದ್ದಾರೆ.

Advertisement

ಒಂದು ಹೊತ್ತಿನ ತುತ್ತು ನೀಡಿದರೂ ಆ ಜೀವದ  ಹಸಿವು ಮುಂದಕ್ಕೆ ಹೋಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಇಡೀ ವ್ಯವಸ್ಥೆಯೇ ಮರುಗುತ್ತಿರುವ ಕಾಲಮಾನದಲ್ಲಿ ಕನ್ನಡ ಚಿತ್ರರಂಗದ ನಟ, ಮಾಡೆಲ್ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ರಾಜ್ಯಾದ್ಯಂತ ಸುಮಾರು 16,000ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್  ಕಿಟ್ ಗಳನ್ನು ನೀಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಭುವನಂ ಫೌಂಡೇಶನ್ ನ ಅಡಿಯಲ್ಲಿ ‘ಶ್ವಾಸ’, ‘ಬಾಂಧವ’, ಹಾಗೂ ‘ಫೀಡ್ ಕರ್ನಾಟಕ’ ಯೋಜನೆಯ ಹೆಸರಿನಲ್ಲಿ ಜನರ ಸೇವೆ ಮಾಡಿ ಮಾದರಿ ಎನ್ನಿಸಿಕೊಂಡಿದ್ದಾರೆ.

ಜನ ಸಾಮಾನ್ಯರ ಧ್ವನಿಯಾಗಿ, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಇರುವ ಹಿಂದುಳಿದ ವರ್ಗದವರ ಹಸಿವನ್ನು ನೀಗಿಸಿ, ಅವರಿಗೆ ಕೋವಿಡ್ ಜಾಗೃತಿಯನ್ನೂ ಮೂಡಿಸಿ  ತಮ್ಮ ಜವಾಬ್ದಾರಿ ಮೆರೆದ ಚಂದನವನದ ತಾರೆಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಜೋಡಿ ನಮ್ಮ ಉದಯವಾಣಿ ಬಳಗದೊಂದಿಗೆ  ಫೇಸ್ ಬುಕ್ ಲೈವ್ ಪ್ರೋಗ್ರಾಂ ನಲ್ಲಿ ನೆರವಿನ ಅನುಭವ ಹಂಚಿಕೊಂಡಿದೆ.

ಪರೋಪಕಾರಾರ್ಥಂ ಇದಂ ಶರೀರಂ

ಜನ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸಾಧ‍್ಯವಾದಷ್ಟು ಸಹಾಯ ಮಾಡಬೇಕು ಎಂಬ ಮನಸ್ಸು ಮೊದಲಿನಿಂದಲೂ ಇದ್ದಿತ್ತು. ಕೊಡಗಿನಲ್ಲಿ ಗುಡ್ಡ ಕುಸಿತವಾದಾಗ ಹಾಗೂ ಉತ್ತರ ಕರ್ನಾಟಕದಲ್ಲಿ ನೆರೆ ಬಂದ ಸಂದರ್ಭದಲ್ಲಿ ಜನರು ಕಷ್ಟದಲ್ಲಿ ಇದ್ದಾಗ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಯೋಚನೆ ಬಂದಿದ್ದು, ಮುಂದೆಯೂ ಕೂಡ ಇಂತಹ ಸೇವೆ ಮಾಡಬೇಕು ಎಂಬ ಮನಸ್ಸು ಇದ್ದಿತ್ತು. ಕೋವಿಡ್ ಎರಡನೇ ಅಲೆಯಲ್ಲಿ ಜನರು ಕಷ್ಟದಲ್ಲಿರುವಾಗ ಮನಸ್ಸು ಕರಗಿತು. ಜನ ನಮ್ಮನ್ನು ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿದ್ದಾರೆ. ಮೂರು ಹೊತ್ತುಗಳಲ್ಲಿ ಊಟ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗ ಜನ ಕಷ್ಟದಲ್ಲಿದ್ದಾರೆ. ನಾವು ನಮ್ಮ ಸಣ್ಣದೊಂದು ಪಾಲನ್ನು ಅವರಿಗಾಗಿ ನೀಡಿದ್ದೇವೆ ಅಷ್ಟೇ. ಈ ಶರೀರ ಇರುವುದೇ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದಕ್ಕೆ. ಹಾಗೆ ಬದುಕುವುದಕ್ಕೆ ಇದು ನಮ್ಮ ಸಣ್ಣ ಪ್ರಯತ್ನ ಎನ್ನುತ್ತಾರೆ ಭುವನ್.

Advertisement

(ನಟ ಭುವನ್ ಪೊನ್ನಣ್ಣ)

ನಟನೆ ಮಾತ್ರವಲ್ಲ, ಜನರ ಧ್ವನಿಯಾಗಿರುವುದೂ ಕೂಡ ನಮ್ಮ ಜವಾಬ್ದಾರಿ

ಕೋವಿಡ್ ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನ ನಮ್ಮನ್ನು ಸಿನೆಮಾದಲ್ಲಿ ಒಪ್ಪಿಕೊಂಡು ಆಶೀರ್ವಾದ ಮಾಡಿದ್ದಾರೆ. ನಟನೆ ಮಾಡುವುದು ಮಾತ್ರ ನಮ್ಮ ಕೆಲಸ ಅಲ್ಲ. ನಮ್ಮನ್ನು ಬೆಳೆಸಿದವರ ಧ್ವನಿಯಾಗಿ ಇರುವುದು ಕೂಡ ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಹಾಗಾಗಿ ಭುವನ್ ಹಾಗೂ ನಾನು, ನಮ್ಮ ಸ್ನೇಹಿತರ ಬಳಗದವರೆಲ್ಲಾ ಸೇರಿಕೊಂಡು ಭುವನಂ ಸಂಸ್ಥೆಯ ಮೂಲಕ ಈ ಸಹಾಯ ಮಾಡಿದ್ದೇವೆ, ಇನ್ನು ಮುಂದೆ ಕೂಡ ಜನರ ಸೇವೆಯನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ನಟಿ ಹರ್ಷಿಕಾ.

(ನಟಿ ಹರ್ಷಿಕಾ ಪೂಣಚ್ಚ)

ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು ‘ಭುವನಂ’ನ ಮುಂದಿನ ಯೋಜನೆ

ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ನಾವು ಭೇಟಿ ನೀಡಿದ್ದೇವೆ. ಅಲ್ಲಿ ಈ 21 ನೇ ಶತಮಾನದಲ್ಲಿಯೂ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಬಯಲಿಗೆ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಆ ಸ್ಥಿತಿ ನಮಗೆ ಬಹಳ ನೋವು ಕೊಟ್ಟಿದೆ. ನಮ್ಮ ಸಂಸ್ಥೆಯ ಮುಂದಿನ ಯೋಜನೆ ಹಂತ ಹಂತವಾಗಿ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಸಿಕೊಡುವುದಾಗಿದೆ.

ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡ ಭುವನ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನನಗೆ ವಾಟ್ಸ್ಯಾಪ್ ನಲ್ಲಿ ಮೆಸೇಜ್ ಮಾಡಿ  ಅವರ ಮನೆ ಹತ್ತಿರದಲ್ಲಿರುವ ಸುಮಾರು 150 ಹಕ್ಕಿ ಪಿಕ್ಕಿ ಜನಾಂಗದ ಕುಟುಂಬದವರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಿದೆಯಾ ಅಂತ ಕೇಳಿದ್ದರು. ನಾವು ಆಗ ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಫೀಡ್ ಕರ್ನಾಟಕ ಯಾತ್ರೆಯಲ್ಲಿದ್ದೆವು. ನನಗೆ ವಿಜಯ್ ಅವರ ಜೊತೆ ಸರಿಯಾಗಿ ಮಾತಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಅವರೇ ನನ್ನಲ್ಲಿ ಮತ್ತೆ ಕೇಳಿದ್ದರು. ಅದಾಗಿ ಮರುದಿನ ಅವರಿಗೆ ಆ್ಯಕ್ಸಿಡೆಂಟ್ ಆಗಿದೆ  ಅಂತ ಸುದ್ದಿ ಕೇಳ್ಪಟ್ಟೆ. ಅವರಿಗೆ ವಾಯ್ಸ್ ಮೆಸೆಜ್ ಮಾಡಿ ಬೇಗ ಗುಣಮುಖರಾಗಿ ಎಂದು ಹೇಳಿದ್ದೆ. ಮತ್ತೆ ಅವರು ಮಾತಾಡಲೇ ಇಲ್ಲ. ನನಗೆ ಅವರ ಬೇಡಿಕೆ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರವಿದೆ. ಮುಂದಿನ ದಿನಗಳಲ್ಲಿ ಖಂಡಿತ ಆ ಜನಾಂಗದವರಿಗೆ ಸಹಾಯ ನೀಡಲಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next