ಮಾಗಡಿ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಬಂದ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರನ್ನು ಗ್ರಾಮದ ಯುವಕ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ನಡೆಯಿತು.
ತಾಲೂಕಿನ ತಟ್ಟೆಕೆರೆ ಗ್ರಾಮದ ಕೆರೆ ಏರಿ ರಸ್ತೆ ಕಾಮಗಾರಿಗೆ ಮೂರನೇ ಬಾರಿಗೆ ಭೂಮಿ ಪೂಜೆ ಮಾಡಲು ಡಾ.ಶ್ರೀನಿವಾಸಮೂರ್ತಿ ಮುಂದಾದರು. ಆಗ ಗ್ರಾಮದ ಯುವಕ ಶ್ರೀನಿವಾಸ್ ಘೇರಾವ್ ಹಾಕಿ, ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಮೊದಲು ರಸ್ತೆ ಅಭಿವೃದ್ಧಿ ಮಾಡಿ: ಶಾಸಕರಾಗಿ ನಾಲ್ಕೂವರೆ ವರ್ಷದ ನಂತರ, ಚುನಾವಣೆ ಸಮೀಪಿಸುತ್ತಿರುವ ವೇಳೆ ಗ್ರಾಮಕ್ಕೆ ಬರುತ್ತೀರ, ಸಮಸ್ಯೆ ಹೇಳಿಕೊಳ್ಳಲು ದೂರವಾಣಿ ಕರೆ ಮಾಡಿದ್ರೂ ಸ್ವೀಕರಿಸುವುದಿಲ್ಲ, 3 ತಿಂಗಳ ಹಿಂದೆ 1 ಕೋಟಿ ರೂ.ನ ರಸ್ತೆ ನಿರ್ಮಿಸುವ ಭರವಸೆ ನೀಡಿ, ಭೂಮಿ ಪೂಜೆ ಮಾಡಿ ತೆರಳಿದವರು, ಮತ್ತೆ 50 ಲಕ್ಷ ರೂ.ನಲ್ಲಿ ರಸ್ತೆ ನಿರ್ಮಿಸುವುದಾಗಿ ಹೇಳಿ ಪುನಃ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದೀರಿ, ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ನಂತರ ಬಂದು ಉದ್ಘಾಟಿಸಿ ಎಂದು ಹೇಳಿದ್ದಾನೆ.
ಯುವಕನ ಮೇಲೆ ದರ್ಪ: ಈ ವೇಳೆ ಶಾಸಕರ ಬೆಂಬಲಿಗರು ಯುವಕ ಶ್ರೀನಿವಾಸ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಲ್ಲದೆ, ತಳಾಟ, ನೂಕಾಟ ನಡೆಸಿ, ಬೆದರಿಸಲು ಮುಂದಾದರು. ಎರಡು ಬಾರಿ ಪೂಜೆ: ಈ ವೇಳೆ ಯುವಕ ಶ್ರೀನಿವಾಸ್ ಮಾತನಾಡಿ, ತಟ್ಟೆಕೆರೆ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡುವುದಾಗಿ ಶಾಸಕರು ಹೇಳಿದ್ದರು. ಈಗ ಏರಿಯ ಮೇಲೆ ಮಾತ್ರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಪೂಜೆ ಮಾಡಿ ಹೋದವರೂ ಮೂರನೇ ಬಾರಿ ಪೂಜೆ ಮಾಡಲು ಬಂದಿದ್ದಾರೆ ಎಂದು ದೂರಿದರು.
2 ಬಾರಿ ಮಾತ್ರ ಭೇಟಿ: ಈ ಬಗ್ಗೆ ಶಾಸಕರನ್ನು ಪ್ರಶ್ನಿಸಿದ ವೇಳೆ ಶಾಸಕರು ಕುಪಿತಗೊಂಡು ತಳಾಟ, ನೂಕಾಟ ನಡೆಸಿದ್ದಾರೆ. ಇದರ ಪರಿಣಾಮವನ್ನು ಅವರು ಮುಂದಿನ ಚುನಾವಣೆಯಲ್ಲಿ ಎದುರಿಸಲಿ ದ್ದಾರೆ. ಕಳೆದ 10 ವರ್ಷದಲ್ಲಿ ಗ್ರಾಮದ ಖಾಸಗಿ ಕಾರ್ಯಕ್ರಮಕ್ಕೆ 2 ಬಾರಿ ಮಾತ್ರ ಭೇಟಿ ನೀಡಿದ್ದಾರೆ, 10 ವರ್ಷದಿಂದ ಏರಿ ರಸ್ತೆ ಕಿತ್ತು ಹೋಗಿದ್ದು, ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಮಳೆ ಬಂದರೆ ನರಕಯಾತನೆ ಅನುಭವಿಸು ವಂತಾಗಿದ್ದು, ಸಲ್ಪ ಯಾಮಾರಿದರೆ ಕೆರೆಗೆ ಬೀಳುವಂತಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದ ಯುವಕ, ಗ್ರಾಪಂ ವ್ಯಾಪ್ತಿಯಿಂದ ಗ್ರಾಮದ ಒಳಗೆ ರಸ್ತೆ ಕಾಮಗಾರಿ ನಡೆದಿದೆಯೇ ಹೊರತು, ಶಾಸಕರ ಅನುದಾನದಿಂದ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಿದರು. ಜಿಪಂ ಮಾಜಿ ಸದಸ್ಯ ಎಸ್‌ಸಿಬಿಎಸ್ ಶಿವರುದ್ರಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಚನ್ನಗಂಗಯ್ಯ, ಕಾಮರಾಜು, ಗೋಪಾಲ್, ಜವಜರ್ ಇತರರು ಇದ್ದರು.