Advertisement

ಭೀಮಾ ತೀರದಲ್ಲಿ ನೀರಿಗೆ‌ ಹಾಹಾಕಾರ

10:09 AM Nov 16, 2021 | Team Udayavani |

ವಾಡಿ: ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಚಾಮನೂರು ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದಿದೆ. ತುಂಬಿ ಹರಿಯುತ್ತಿರುವ ಭೀಮಾ ನದಿ ದಂಡೆಯಲ್ಲಿರುವ ಈ ಊರಿಗೆ ಜಲಕ್ಷಾಮ ನಿಲ್ಲದಾಗಿದೆ. ಬೋರ್‌ವೆಲ್‌ ಮುಂದೆ ಕೊಡಗಳ ಸಾಲು ಕಾಣುತ್ತಿದ್ದರೆ, ಹನಿ ನೀರಿಗೂ ಗ್ರಾಮಸ್ಥರ ಕಚ್ಚಾಟ ಮುಂದುವರೆದಿದೆ.

Advertisement

ಸುಮಾರು 1,600 ಜನಸಂಖ್ಯೆ ಹೊಂದಿರುವ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರು ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ಕಳೆದ ನಾಲ್ಕು ತಿಂಗಳಿಂದ ನೀರಿಗಾಗಿ ಪರದಾಟ ಶುರುವಾಗಿದೆ. ನೀರು ಶುದ್ಧೀಕರಣ ಘಟಕ ಕೆಟ್ಟು ನಾಲ್ಕು ತಿಂಗಳಾಗಿದ್ದು, ಅಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಐದು ಸಾವಿರ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿರುವ ಓವರ್‌ಹೆಡ್‌ ಟ್ಯಾಂಕ್‌ ಇದೆ. ನೀರು ಸಂಗ್ರಹ ಮಾಡಲು ಅದಕ್ಕೆ ಮೋಟಾರು ಯಂತ್ರ ಅಳವಡಿಕೆಯಾಗಿಲ್ಲ. ಇರುವ ಒಂದು ಬೋರ್‌ವೆಲ್‌ ನೀರಿನ ನಳಕ್ಕೆ ಇಡೀ ಊರಿನ ಜನರು ಮುಗಿಬೀಳುತ್ತಾರೆ. ನೀರು ಸಿಗದಕ್ಕೆ ನಿತ್ಯವೂ ಜಗಳ ನಡೆದು ಗ್ರಾಮದಲ್ಲಿ ಅಶಾಂತಿ ವಾತಾವರಣ ಮೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣಗಳು ಘಟಿಸಿದ್ದಾಗ ಅಧಿಕಾರಿಗಳ ತಂಡದಿಂದ ಕುಡಿಯುವ ನೀರಿನ ಪರೀಕ್ಷೆ ನಡೆಸಲಾಯಿತು. ನೇರವಾಗಿ ನದಿಯಿಂದ ತಂದ ನೀರನ್ನು ಕುಡಿಯಬಾರದು ಎಂದು ಅಧಿಕಾರಿಗಳು ಆದೇಶ ನೀಡಿದ್ದು, ಶುದ್ಧ ನೀರಿನ ಘಟಕ ದುರಸ್ತಿ ಮಾಡುವುದನ್ನು ಮರೆತಿದ್ದಾರೆ. ಬೋರ್‌ವೆಲ್‌ ನೀರು ಯಾರಿಗೂ ಸಾಕಾಗುತ್ತಿಲ್ಲ. ಗೃಹ ಬಳಕೆಗಾಗಿ ನದಿಗಿಳಿದು ನೀರು ತರುವುದು ಅನಿವಾರ್ಯವಾಗಿದೆ. ಸಮಸ್ಯೆಯನ್ನು ಗ್ರಾಪಂ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಶಾಸಕ ಪ್ರಿಯಾಂಕ್‌ ಖರ್ಗೆಯವರಿಗೂ ಮನವಿ ಸಲ್ಲಿಸಿದ್ದೇವೆ. ಸಂಸದ ಡಾ| ಉಮೇಶ ಜಾಧವ ಅವರೂ ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಇಂದಿನ ಮಕ್ಕಳು ಆ ದಿನಗಳ ಎಲ್ಲಾ ಸುಖದಿಂದ ವಂಚಿತರು

ಒಂದು ವಾರದೊಳಗಾಗಿ ನೀರು ಶುದ್ಧೀಕರಣ ಘಟಕ ದುರಸ್ತಿಯಾಗಬೇಕು. ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಪೂರೈಸಬೇಕು. ನಿರ್ಲಕ್ಷ್ಯ ವಹಿಸಿದರೆ ಕಡಬೂರ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರಾದ ಮಲ್ಲಿಕಾರ್ಜುನ ಮಾಲಗತ್ತಿ, ಭಾಗಣ್ಣ ದೊರೆ, ಚಂದ್ರಕಾಂತ ನಾಯಕ, ಮಲ್ಲೇಶಿ ಪೂಜಾರಿ, ಚಂದ್ರಾಮ ಮಾಲಗತ್ತಿ, ಹಣಮಂತ ದೊರೆ, ಸಿದ್ದಮ್ಮ ಚಂದಮಕ್ಕಳ, ಪಾರ್ವತಿ ತಳವಾರ, ಮಲ್ಲಿನಾಥ ತಳವಾರ, ಅನಿಲಕುಮಾರ ಹೊಸಮನಿ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next