Advertisement

IAF ಸರಕು ಸಾಗಣೆ ವ್ಯವಸ್ಥೆಗೆ ಭೀಮ ಬಲ – ವಾಯುಪಡೆಯಲ್ಲಿ ಹೊಸ ಯುಗಾರಂಭ; C-295 ಸೇರ್ಪಡೆ

08:44 PM Sep 25, 2023 | Team Udayavani |

ಗಾಜಿಯಾಬಾದ್‌: ಭಾರತೀಯ ವಾಯುಪಡೆಯ ಸರಕು-ಸೇವಾ ವ್ಯವಸ್ಥೆಗೆ ಬಲನೀಡುವ ಸಿ-295 ವಿಮಾನವನ್ನು ಸೋಮವಾರ ಎಐಎಫ್ಗೆ ಸೇರ್ಪಡೆಗೊಳಿಸಲಾಗಿದ್ದು, ಈ ಮೂಲಕ ಸರಕು-ಸೇವಾ ವಲಯದಲ್ಲಿ ಹೊಸ ಶಕೆ ಆರಂಭವಾದಂತಾಗಿದೆ.

Advertisement

ಗಾಜಿಯಾಬಾದ್‌ನ ಹಿಂಡನ್‌ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಐಎಎಫ್ ಮುಖ್ಯಸ್ಥರಾದ ವಿ.ಆರ್‌.ಚೌಧರಿ ಸಮ್ಮುಖದಲ್ಲಿ ಸಿ-295 ಸೇರ್ಪಡೆಗೊಳಿಸಲಾಗಿದ್ದು, 6 ದಶಕಗಳಿಂದ ಸೇವೆಯಲ್ಲಿರುವ ಆರ್ವೋ – 748 ವಿಮಾನಗಳಿಗೆ ಪರ್ಯಾಯವಾಗಿ ಈ ನೂತನ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ವರ್ಷಗಳ ಹಿಂದೆ ಸ್ಪೇನ್‌ ಮೂಲದ ಸಂಸ್ಥೆ ಏರ್‌ಬಸ್‌ ಜತೆಗೆ ಸಿ-295ನ ಖರೀದಿಗೆ ಸಂಬಂಧಿಸಿ ಭಾರತ 21,935 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದು, ಅದರ ಭಾಗವಾಗಿ ಸಿ-295ನ ಮೊದಲ ವಿಮಾನವನ್ನು ಸೆ.13ರಂದೇ ಹಸ್ತಾಂತರಿಸಲಾಗಿತ್ತು. ಸೆ.20ರಂದು ವಡೋದರಾಗೆ ಸಿ-295 ಬಂದಿಳಿದಿದ್ದು, ಇದೀಗ ಐಎಎಫ್ಗೆ ಸೇರ್ಪಡೆಗೊಂಡಿದೆ. ರಕ್ಷಣೆಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ” ಸುಪೀರಿಯರ್‌ ಏರ್‌ಕ್ರಾಫ್ಟ್’ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

ಸಿ-295 ವೈಶಿಷ್ಟ್ಯವೇನು ?
* ಏಕಕಾಲಕ್ಕೆ 71 ಟ್ರೂಪ್ಸ್‌ ಅಥವಾ 50 ಪ್ಯಾರಾಟ್ರೂಪರ್‌ಗಳನ್ನು ಸಾಗಿಸುವ ಸಾಮರ್ಥ್ಯ
* ಬೃಹತ್‌ವಿಮಾನಗಳು ತಲುಪಲಾಗದಂಥ ಸ್ಥಳದಲ್ಲೂ ಕಾರ್ಯಾಚರಿಸುವ ಛಾತಿ
* ಯುದ್ಧ ಸಂದರ್ಭದಲ್ಲಿ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರ ಕಾರ್ಯಕ್ಕೆ ಸಹಕಾರಿ
* ವಿಪತ್ತಿನ ಸಂದರ್ಭದಲ್ಲೂ ವಿಶೇಷ ಕಾರ್ಯಾಚರಣೆ, ಸಮುದ್ರ ಗಸ್ತಿಗೂ ಸೈ !

ಆತ್ಮನಿರ್ಭರತೆಗೆ ಸಹಕಾರಿ
ಒಪ್ಪಂದ ಪ್ರಕಾರ, ಏರ್‌ಬಸ್‌ ಕಂಪನಿಯು ಸಿ-295ನ ಮೊದಲ 16 ವಿಮಾನಗಳನ್ನು ತಯಾರಿಸಿ ಭಾರತಕ್ಕೆ ಹಸ್ತಾಂತರಿಸಲಿದೆ. ಬಳಿಕ ವಿಮಾನ ತಯಾರಿಕೆಯ ತಂತ್ರಜ್ಞಾನವನ್ನು ಭಾರತದ ಜತೆಗೆ ಏರ್‌ಬಸ್‌ ವಿನಿಮಯ ಮಾಡಿಕೊಳ್ಳಲಿದೆ. ನಂತರ 40 ವಿಮಾನಗಳನ್ನು ಭಾರತದಲ್ಲೇ ದೇಶಿಯ ಸಂಸ್ಥೆ ಟಾಟಾ ಅಡ್ವಾನ್ಸ್‌$x ಸಿಸ್ಟಮ್‌ (ಟಿಎಎಸ್‌ಎಲ್‌) ಉತ್ಪಾದಿಸಲಿದೆ. ವಿಮಾನದ ಉತ್ಪಾದನೆ ಮತ್ತು ನಿರ್ವಹಣೆ ಎರಡೂ ಖಾಸಗಿ ಸಂಸ್ಥೆಯದ್ದೇ ಆಗಿರುವುದರಿಂದ ದೇಶೀಯ ಸಂಸ್ಥೆಗಳಿಗೂ ಇದು ಮಹತ್ತರ ಅವಕಾಶಗಳನ್ನು ಸೃಷ್ಟಿಸಿಕೊಡಲಿದೆ.

Advertisement

ಉತ್ಪಾದನೆ ಎಲ್ಲಿ?
ಈಗಾಗಲೇ ಭಾರತದಲ್ಲಿ ಸಿ-295 ವಿಮಾನದ ಬಿಡಿ ಭಾಗಗಳನ್ನು ಹೈದರಾಬಾದ್‌ನಲ್ಲಿ ಉತ್ಪಾದಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಗುಜರಾತ್‌ನ ವಡೋದರದಲ್ಲಿ ವಿಮಾನ ಬಿಡಿಭಾಗಗಳ ಜೋಡಣೆ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದರು. 2024ರ ನವೆಂಬರ್‌ನಲ್ಲಿ ಈ ಘಟಕ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಆ ಬಳಿಕ ಹೈದರಾಬಾದ್‌ನಲ್ಲಿ ಉತ್ಪಾದನೆಯಾದ ಬಿಡಿ ಭಾಗಗಳ ಜೋಡಣೆ ವಡೋದರಾದಲ್ಲಿ ನಡೆಯಲಿದೆ.

ಸಿ-295 ಭಾರತೀಯ ವಾಯುಪಡೆಗೆ ನಿರ್ಣಾಯಕ ಬದಲಾವಣೆಗಳ ಪೈಕಿ ಒಂದಾಗಿದ್ದು, ನೂತನ ಸೇರ್ಪಡೆಯು ಐಎಎಫ್ನ ಏರ್‌ಲಿಫ್ಟ್ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಮುಂಬರುವ ದಿನಗಳಲ್ಲಿ ಯುದ್ಧತಂತ್ರವನ್ನು ಮೇಲ್ದರ್ಜೆಗೇರಿಸಲು ಇದು ಸಹಕಾರಿಯಾಗಲಿದೆ.
– ಮಾ. ಆರ್‌ಕೆಎಸ್‌ ಬಧೌರಿಯಾ, ಐಎಎಫ್ ನಿವೃತ್ತ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next