Advertisement

ಜಿಲ್ಲಾದ್ಯಂತ ಸಂಕ್ರಾಂತಿ ಸಂಭ್ರಮ

11:43 AM Jan 16, 2020 | Naveen |

ಬೀದರ: ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಬುಧವಾರ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ಹಬ್ಬ ತನ್ನದೇಯಾದ ಸಂಪ್ರದಾಯ ಮತ್ತು ವೈಶಿಷ್ಟ್ಯತೆಗಳಿದ್ದು, ಅದರಲ್ಲಿ ಸಂಕ್ರಾಂತಿ ಎಲ್ಲ ಹಬ್ಬಕ್ಕಿಂತ ವಿಶೇಷ. ಹೆಣ್ಣು ಮಕ್ಕಳು ಸಂಭ್ರಮದಿಂದ ಹಬ್ಬ ಆಚರಿಸಿದರೆ, ಗಂಡು ಮಕ್ಕಳು ಗಾಳಿಪಟ ಹಾರಿಸಿ ಸಂತಸ ಪಟ್ಟರು. ಹಿಂದಿನ ಎರಡ್ಮೂರು ವರ್ಷ ಪ್ರಕೃತಿ ವಿಕೋಪದಿಂದ ಹಬ್ಬ ಸಂಭ್ರಮ ಮರೆಸಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಂಭ್ರಮ ಮನೆ ಮಾಡಿತ್ತು.

Advertisement

ಪ್ರತಿಯೊಬ್ಬರ ಮನೆಯಲ್ಲಿ ಸುರ್ಯೋದಯವಾಗುತ್ತಿದ್ದಂತೆ ಸಂಭ್ರಮ ಆರಂಭವಾಗಿತ್ತು. ಹಬ್ಬಕ್ಕಾಗಿ ತಾಯಿ ಮಕ್ಕಳಿಗೆ ಚಿಗುಳು ಮತ್ತು ಎಣ್ಣೆ ನೀರು ಹಾಕಿ ಪುಣ್ಯ ಸ್ನಾನ ಮಾಡಿಸಿದರು. ಮನೆ ಮುಂದೆ ರಂಗೋಲಿ ಕಂಗೊಳಿಸುತ್ತಿತ್ತು. ನಿತ್ಯ ಚಹಾ ಅಥವಾ ಕಾಫಿಯಿಂದ ಆರಂಭವಾಗುವ ದಿನ ಸಂಕ್ರಾಂತಿ ದಿನದಂದು ಮಾತ್ರ ಎಳ್ಳು- ಬೆಲ್ಲ, ಹಣ್ಣು ಸೇವಿಸಿ ಹಬ್ಬ ಸ್ವಾಗತಿಸುವುದು ಸಾಮಾನ್ಯವಾಗಿತ್ತು.

ನಂತರ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೊಸ ಬಟ್ಟೆ ತೊಟ್ಟು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವುದು ಮತ್ತು ಸಂಜೆ ಹೊತ್ತಿಗೆ ಸಂಬಂಧಿಕರು ಮತ್ತು ಗೆಳೆಯರ ಮನೆಗಳಿಗೆ ತೆರಳಿ ಎಳ್ಳು ಬೀರಿ ಶುಭಾಷಯ
ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಹಬ್ಬದ ನಿಮಿತ್ತ ಎಳ್ಳು ಬೀರುವುದರ ಜೊತೆಗೆ ಪ್ರತಿ ಮನೆಯಲ್ಲಿ ಮುತ್ತೆ$çದೆಯವರಿಗೆ ಉಡುಗೊರೆ ನೀಡುವ ಕಾರ್ಯಕ್ರಮಗಳು ನಡೆದವು.

ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಲಾಯಿತು. ನಗರದ ಕೆಲವೆಡೆ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಮಹಿಳೆಯರು ಬಗೆಬಗೆಯ ಚಿತ್ತಾರಗಳನ್ನು ಅರಳಿಸಿದರು. ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಎಳ್ಳು-ಬೆಲ್ಲ ವಿನಿಮಯದ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದರೆ, ಹುಮನಾಬಾದನಲ್ಲಿ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಲಾಯಿತು. ಬಾನಂಗಳದಲ್ಲಿ ಗಾಳಿಪಟ-ಪತಂಗಗಳ ನಯನ ಮನೋಹರ ಚಿತ್ತಾರ ಆಕರ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next