ಬೀದರ: ಚೀನಾ ಹಾಗೂ ಮತ್ತಿತರೆ ಭಾಗಗಳಲ್ಲಿ ಹರಡಿರುವ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಎಲ್ಲ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್ ಮಹಾದೇವ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಮುಂಜಾಗ್ರತೆ ಕುರಿತು ಮಂಗಳವಾರ ನಗರದ ಜಿಲ್ಲಾಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಬಾರದಂತೆ ಮುನ್ನೆಚ್ಚರಿಕೆಯಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಬ್ರಿಮ್ ವೈದ್ಯರು, ನರ್ಸಿಂಗ್ ಹೊಮ್‌ಗಳ ವೈದ್ಯರೊಂದಿಗೆ ಸಭೆ ನಡೆಸಿ, ಸೂಕ್ತ ಯೋಜನೆಯೊಂದನ್ನು ರೂಪಿಸಬೇಕು ಎಂದು ಡಿಎಚ್‌ಒಗೆ ನಿರ್ದೇಶನ ನೀಡಿದರು.
ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಭಾಗಗಳಿಂದ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳನ್ನು ಗುರುತಿಸುವ ಕೆಲಸವಾಗಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಸಾಕಾಗುಷ್ಟು ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಎಲ್ಲ ಶಾಲಾ ಕಾಲೇಜುಗಳಲ್ಲಿ ಬೆಳಗ್ಗೆ ಪ್ರಾರ್ಥನೆಗೆ ಮುನ್ನ ಕೊರೊನಾ ವೈರಸ್ ಸೋಂಕು ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸುವಂತೆ ಡಿಡಿಪಿಐ ಹಾಗೂ ಡಿಡಿಪಿಯುಗೆ ತಿಳಿಸಿದರು.
ಅಶುಚಿತ್ವದಿಂದಲೂ ಹೆಚ್ಚಿನ ಖಾಯಿಲೆಗಳು ಹರಡುವುದರಿಂದ ಗ್ರಾಮಗಳಲ್ಲಿ ಚರಂಡಿಗಳನ್ನು ಶುಚಿಗೊಳಿಸಬೇಕು. ಶುಚಿತ್ವ ಮತ್ತು ಶೌಚಾಲಯ ಬಳಕೆಯ ಬಗ್ಗೆ ಗ್ರಾಮಸ್ಥರಲ್ಲಿ ತಿಳಿವಳಿಕೆ ಮೂಡಿಸಬೇಕು. ನಗರ ಪ್ರದೇಶದಲ್ಲಿಯೂ ಶುಚಿತ್ವ ಕಾಪಾಡಬೇಕು ಎಂದು ಪೌರಾಯುಕ್ತರು ಹಾಗೂ ಮತ್ತಿತರೆ ಅಧಿಕಾರಿಗಳಿಗೆ ಹೇಳಿದರು. ಎಲ್ಲ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿನ ಬಗ್ಗೆ ತಿಳಿಸಬೇಕು. ಶುಚಿತ್ವ ಕಾಪಾಡುವಂತೆ ತಿಳಿವಳಿಕೆ ನೀಡಬೇಕು ಎಂದು ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊರೊನಾ ವೈರಸ್ ಸೋಂಕಿನ ಬಗ್ಗೆ ವಿವರಣೆ ನೀಡಿದ ಬೀದರ ಬ್ರಿಮ್ಸ್‌ನ ವೈದ್ಯಾಧಿ ಕಾರಿ ಡಾ|ಮಹೇಶ ತೊಂಡಾರೆ ಮಾತನಾಡಿ, 1960ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ವೈರಸ್ 2019ರ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿತು. ಇದೀಗ ನೋವೆಲ್ ಕೊರೊನಾ ವೈರಸ್ ಎಂದು ಹೆಸರಿಸಲಾಗಿದೆ. ಇದು ಜಗತ್ತಿನ 28 ದೇಶಗಳಲ್ಲಿ ವ್ಯಾಪಿಸಿದ್ದು, 43,101 ಜನರು ಮೇಲೆ ಪರಿಣಾಮ ಬೀರಿದೆ. ಈವರೆಗೆ 1018 ಜನರು ಮೃತಪಟ್ಟಿದ್ದು, 4043 ರೋಗಿಗಳು ಗುಣಮುಖರಾಗಿದ್ದಾರೆ. ಭಾರತದಲ್ಲಿ 3 ಪ್ರಕರಣಗಳು ಖಚಿತಪಟ್ಟಿವೆ. ಈ ವೈರಸ್ ಸೋಂಕಿತ ವ್ಯಕ್ತಿಗಳು ಶೇ.2ರಷ್ಟು ಮಾತ್ರ ಮರಣ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಗಾಬರಿಪಡುವ ಅಗತ್ಯವಿರುವುದಿಲ್ಲ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ್, ಭಂವರ್ ಸಿಂಗ್ ಮೀನಾ, ಬ್ರಿಮ್ಸ್ ನಿರ್ದೇಶಕ ಡಾ|ಶಿವಕುಮಾರ ಸಿ.ಆರ್., ತಹಶೀಲ್ದಾರರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.