Advertisement

ಭಾಯಂದರ್‌ ಹನುಮಾನ್‌ ಭಜನಾ ಮಂಡಳಿ ಮಹಿಳಾ ವಿಭಾಗ:ಪಡಿಪೂಜೆ

05:10 PM Dec 06, 2018 | Team Udayavani |

ಮುಂಬಯಿ: ಶ್ರೀ ಹನುಮಾನ್‌ ಭಜನಾ ಮಂಡಳಿ ಭಾಯಂದರ್‌ ಇದರ ಶ್ರೀ ಮಣಿಕಂಠ ಸೇವಾ ಸಂಘದ 21 ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯ ಪೂರ್ವಭಾವಿಯಾಗಿ ಡಿ. 1 ರಂದು ಮಹಿಳಾ ಸದಸ್ಯೆಯರ ವತಿಯಿಂದ ಪಡಿಪೂಜೆ ಮತ್ತು ಅನ್ನ ಸಂತರ್ಪಣೆಯು ಜರಗಿತು.

Advertisement

ಶಿಬಿರದ ಗುರುಸ್ವಾಮಿ ಸಂತೋಷ್‌ ಮೂಡು ಮಾರ್ನಾಡು ಅವರ ಪೌರೋಹಿತ್ಯದಲ್ಲಿ ಸಂಜೆ ಭಜನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಪಡಿಪೂಜೆ, ಮಹಾಪೂಜೆ ನೆರವೇರಿತು. ಶ್ರೀ ಹನುಮಾನ್‌ ಭಜನಾ ಮಂಡಳಿಯ ಅಧ್ಯಕ್ಷ ಜಯರಾಮ್‌ ಎಂ. ಶೆಟ್ಟಿ ಅವರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ನಮ್ಮ ಮಂಡಳಿಯ 21 ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಡಿ. 28 ರಂದು ಮೊದಲ್ಗೊಂಡು ಡಿ. 30ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಅರುಣ್‌ ತಂತ್ರಿ ಖಂಡಿಗೆ, ವೇದಮೂರ್ತಿ ಗಣೇಶ ಸರಳಾಯ ಮತ್ತು ಸಂತೋಷ್‌ ಗುರುಸ್ವಾಮಿ ಮೂಡುಮಾರ್ನಾಡು ಇವರ ಪೌರೋಹಿತ್ಯದಲ್ಲಿ ಡಿ. 28 ರಂದು ಮುಂಜಾನೆ  5 ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ಥಳ ಶುದ್ಧಿ, ದ್ವಾದಶ ನಾಳಿಕೇರ ಗಣಯಾಗ, ಸ್ವಯಂವರ ಪಾರ್ವತಿ ಹೋಮ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ, ಸಂಜೆ 6.30 ರಿಂದ ಸ್ವಯಂವರ ಪಾರ್ವತಿ ಪೂಜೆಯನ್ನು ಆಯೋಜಿಸಲಾಗಿದೆ. ಡಿ. 29 ರಂದು ಬೆಳಗ್ಗೆ 6 ರಿಂದ ಸ್ವಸ್ತಿ ಪುಣ್ಯಾಹವಾಚನ, ಸಂಜೀವಿನಿ ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಲಕ್ಷ ತುಳಸಿ ಅರ್ಚನೆ, ಭಜನೆ, ಪ್ರಸನ್ನ ಪೂಜೆ, ಅಪರಾಹ್ನ ಪಡಿಪೂಜೆ, ಮಹಾಪೂಜೆ, ಪಲ್ಲಪೂಜೆಯೊಂದಿಗೆ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ನರೇಂದ್ರ ಎಲ್‌. ಮೆಹ್ತಾ, ಸಭಾಪತಿ ಅರವಿಂದ ಶೆಟ್ಟಿ, ಸಮಾಜ ರತ್ನ ಲಯನ್‌ ಡಾ| ಕೆ. ಟಿ. ಶಂಕರ, ಮೀರಾ-ಭಾಯಂದರ್‌ ಕರ್ನಾಟಕ ಮಹಾಮಂಡಳದ ಗೌರವಾಧ್ಯಕ್ಷ ಡಾ| ಅರುಣೋದಯ ರೈ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಕಲಾವಿದ ಪ್ರಕಾಶ್‌ ಪಣಿಯೂರು ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಮಲಾಕ್ಷ ವರ್ಕಾಡಿ ಮತ್ತು ಗಣೇಶ್‌ ಮೂಡುಮಾರ್ನಾಡು ಬಳಗದವರಿಂದ ತುಳುನಾಡಿನ ಪಾರಂಪರಿಕ ಪಂಚವಾದ್ಯಗೋಷ್ಠಿ, ಸದಸ್ಯರಿಂದ ನೃತ್ಯ ವೈವಿಧ್ಯ, ಮಾಯಾ ಶೂರ್ಪನಖೀ-ವಾಲಿ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ವರು ಪಾಲ್ಗೊಂಡು ಸಹಕರಿಸಬೇಕು ಎಂದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೆ. ಕೋಟ್ಯಾನ್‌ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು, ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next