ಕಾರವಾರ : ಭೀಕರ ಮಳೆಯಿಂದ ಗುಡ್ಡ ಕುಸಿದು ಸಾವನ್ನಪ್ಪಿದ ಭಟ್ಕಳದ ಮುಟ್ಟಳ್ಳಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ , ಮೃತ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ನೀಡಿದರು. ದುರಂತದಲ್ಲಿ ಬದುಕಿದ ಕುಟುಂಬದ ಮಕ್ಕಳಿಗೆ ಪಿ.ಜಿ ವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಕರ್ಯವನ್ನು ನೀಡುತ್ತೇವೆ ಎಂದು ಮುಖ್ಯ ಮಂತ್ರಿ ಪ್ರಕಟಿಸಿದರು.
ಲಕ್ಷ್ಮಿ ನಾರಾಯಣ ನಾಯ್ಕ ,ಮಗಳು ಲಕ್ಷ್ಮಿ, ಮಗ ಅನಂತ , ಸಹೋದರ ಬಾಲಕೃಷ್ಣನ ಪ್ರವೀಣ ಗುಡ್ಡ ಕುಸಿತದಿಂದ ನಿನ್ನೆ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದರು.
ಗುಡ್ಡ ಕುಸಿತದಿಂದ ಸಾವಿಗೀಡಾದ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿಗೆ ಬುಧುವಾರ ಸಂಜೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹ ಘಟನೆ ನಿಜಕ್ಕೂ ವಿಷಾದನೀಯ, ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಮನೆಗಳಿಗೆ ತೊಂದರೆ ಇದೆ ಅಂತಹ ಮನೆಯವವರನ್ನು ಈಗಾಗಲೇ ಸ್ಥಳ ಬದಲಾವಣೆ ಮಾಡಲು ನೋಟಿಸ್ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಅನೇಕ ಮನೆಗಳಿಗೆ, ಬೆಳೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ ಹಾಗೂ ಮೀನುಗಾರರಿಗೂ ತೊಂದರೆಯಾಗಿದ್ದು ಈ ಕೂಡಲೇ ವರದಿ ತೆಗೆದುಕೊಂಡು ಪರಿಹಾರ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, 115 ಹಳ್ಳಿಗಳಿಗೆ ತೊಂದರೆಯುಂಟಾಗಿದೆ. 4 ಜನ ಸಾವನ್ನಪ್ಪಿದ್ದಾರೆ. 600 ಮನೆಗಳು ಸಂಪೂರ್ಣ ನಾಶವಾಗಿದ್ದು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈಗಾಗಲೇ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ತುರ್ತು 500 ಕೋಟಿ ಬಿಡುಗಡೆ ಮಾಡಲಾಗಿದೆ ಇನ್ನೂ ಹೆಚ್ಚು ಹಾನಿಯಾಗುವ ಸಂಭವ ಇದ್ದು ಜಿಲ್ಲೆಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.
ಜಿಲ್ಲೆಯ ಬಹು ದಿನಗಳ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಸಂಪೂರ್ಣ ಮಾಹಿತಿ ತೆಗೆದುಕೊಂಡು ಅದಕ್ಕೆ ಸಂಬಂಧಿಸಿದಂತೆ ಕಾರ್ಯ ಕೈಗೊಳ್ಳಲಾಗುವುದು ಹಾಗೂ ಈಗ ಇರುವ ಆಸ್ಪತ್ರೆಗಳಿಗೆ ವೈದ್ಯರ ಕೊರತೆಯಿದ್ದು ಅದನ್ನು ಕೂಡ ನಿವಾರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್, ಹಾಗೂ ಇನ್ನಿತರ ಶಾಸಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.