ಭಟ್ಕಳ: ನಗರದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದಿ ಕಾಶ್ಮೀರ್ ಫೈಲ್ಸ್” ಚಿತ್ರ ಪ್ರದರ್ಶನ ಮಾಡುವಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸಿದ ಘಟನೆ ಭಾನುವಾರ ನಡೆದಿದೆ.
ಮಧ್ಯಾಹ್ನ 2.30 ಕ್ಕೆ ಪ್ರದರ್ಶನಗೊಳ್ಳುತ್ತಿದ್ದ “ರಾಧೆ ಶ್ಯಾಮ್” ಸ್ಥಗಿತಗೊಳಿಸಿ ಕಾಶ್ಮೀರಿ ಪಂಡಿತರ ನೈಜ ಚಿತ್ರಕಥೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಪ್ರದರ್ಶಿಸುವಂತೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರೊಂದಿಗೆ ಚಿತ್ರಮಂದಿರದ ಮೇಲ್ವಿಚಾರಕ ಮಾತನಾಡಿ, ರಾತ್ರಿ 8.45ರ ಪ್ರದರ್ಶನಕ್ಕೆ ಚಿತ್ರವನ್ನು ಪ್ರದರ್ಶಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಇತಿಹಾಸದಲ್ಲಿ ಮುಚ್ಚಿಟ್ಟಂತ ಕಾಶ್ಮೀರಿ ಪಂಡಿತರ ನೈಜ ಚಿತ್ರ ಕಥೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗಾಗಿಯೇ ಅನಾವರಣ ಮಾಡಲಾಗಿದೆ. ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ ಚಿತ್ರ ಮಂದಿರ ಹೌಸ್ ಫುಲ್ ಎಂಬ ಬೋರ್ಡ್ ಹಾಕುವುದರ ಮೂಲಕ ಷಡ್ಯಂತ್ರ ಮಾಡಲಾಗುತ್ತಿದೆ. ಈ ಹಿನ್ನೆಲೆ ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಯಾವುದೇ ರೀತಿಯ ತೊಂದರೆಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬಾಕ್ಸ್ ಆಫೀಸ್ ಯಶಸ್ಸು ಕಂಡ ‘ಕಾಶ್ಮೀರ್ ಫೈಲ್ಸ್’: ಕಣ್ಣೀರಿಟ್ಟ ಪ್ರೇಕ್ಷಕರು
ಈ ವೇಳೆ ಹಿಂದೂ ಕಾರ್ಯಕರ್ತರಾದ ಶ್ರೀನಿವಾಸ ಹನುಮಾನಗರ, ರಾಜೇಶ, ಪಾಂಡುರಂಗ ನಾಯ್ಕ, ಕೃಷ್ಣ ಕಂಚುಗಾರ, ನಾಗೇಶ ನಾಯ್ಕ ಚೌಥನಿ, ದಿನೇಶ ಮೊಗೇರ ಜಾಲಿ, ಮೋಹನ ನಾಯ್ಕ, ಅರುಣ ನಾಯ್ಕ, ವಿವೇಕ ನಾಯ್ಕ ಜಾಲಿ, ಬಾಬು ಕಾರಗದ್ದೆ, ವಸಂತ ಜಂಬೂರ್ ಮಠ ಮುಂತಾದವರು ಉಪಸ್ಥಿತರಿದ್ದರು.