Advertisement

ಭಟ್ಕಳ: ಕಾರಿನ ನಾಮ ಫಲಕ ತೆರವು ; ಪುರಸಭಾ ಅಧ್ಯಕ್ಷರ ಖಂಡನೆ

08:21 PM Jan 19, 2022 | Team Udayavani |

ಭಟ್ಕಳ: ಪುರಸಭಾ ವಾಹನಕ್ಕೆ ಅಳವಡಿಸಿದ್ದ ಕರ್ನಾಟಕ ಸರಕಾರ ಫಲಕ ಹಾಗೂ ಅಧ್ಯಕ್ಷರು, ಪುರಸಭೆ ಎನ್ನುವ ಫಲಕವನ್ನು ಹೊನ್ನಾವರದ ಎ.ಆರ್.ಟಿ.ಓ. ಅವರು ತೆರವು ಗೊಳಿಸಿದ ಘಟನೆ ಬುಧವಾರ ನಡೆದಿದೆ.

Advertisement

ದೂರೊಂದರ ಸಂಬಂಧ ಪುರಸಭೆಗೆ ಎ.ಆರ್.ಟಿ.ಓ. ಅವರಿಂದ ನೋಟೀಸು ನೀಡಲಾಗಿತ್ತು. ನೋಟೀಸು ಮಂಗಳವಾರಷ್ಟೇ ಪುರಸಭೆಗೆ ತಲುಪಿದ್ದು ಪುರಸಭೆಯಿಂದ ಸಮಜಾಯಿಷಿ ನೀಡುವ ಮೊದಲೇ ಸಾರಿಗೆ ಅಧಿಕಾರಿ ಬಂದು ನಾಮ ಫಲಕ ಹಾಗೂ ಕರ್ನಾಟಕ ಸರಕಾರ ಎನ್ನುವ ಫಲಕವನ್ನು ಕೂಡಾ ತೆರವುಗೊಳಿಸಿದ್ದನ್ನು ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ತೀವ್ರವಾಗಿ ಖಂಡಿಸಿದ್ದು ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ಭಟ್ಕಳ ಪುರಸಭೆಗೆ ನೂತನ ಇನೋವಾ ಕಾರನ್ನು ಖರೀಧಿಸಲಾಗಿದ್ದು ಕಾರಿನ ಗಾಜಿಗೆ ಕರ್ನಾಟಕ ಸರಕಾರ ಎಂದು ಕಾರಿನ ಮುಂಬಾಗದಲ್ಲಿ ಅಧ್ಯಕ್ಷರು, ಪುರಸಭೆ, ಭಟ್ಕಳ ಎಂಬ ನಾಮ ಫಲಕ ಹಾಕಲಾಗಿತ್ತು. ಈ ಕುರಿತು ಸಾರಿಗೆ ಅಧಿಕಾರಿಗಳಿಗೆ ದೂರು ಹೋದ ಹೊನ್ನೆಲೆಯಲ್ಲಿ ನೋಟೀಸು ನೀಡಿದ್ದು ನೋಟೀಸಿಗೆ ಉತ್ತರ ಕೊಡುವ ಮೊದಲೇ ನಾಮ ಫಲಕಗಳನ್ನು ತೆರವುಗೊಳಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರ್ವೆಜ್ ಕಾಶಿಮಜಿ, ಕಾರಿನ ನಾಮಫಲಕದ ಕುರಿತು ಸಾರಿಗೆ ಕಚೇರಿಯಿಂದ ನೀಡಿದ ಕಾರಣ ಕೇಳಿ ನೋಟೀಸು ನಮಗೆ ಮಂಗಳವಾರ ಸಂಜೆ ಬಂದು ತಲುಪಿದೆ. ಆದರೆ ಇದಕ್ಕೆ ಉತ್ತರ ಕೊಡುವ ಪೂರ್ವದಲ್ಲೇ ಅಂದರೆ ಬುಧವಾರ ಬೆಳಿಗ್ಗೆಯೇ ಸಾರಿಗೆ ಅಧಿಕಾರಿ ಪುರಸಭೆಗೆ ಬಂದು ನಮ್ಮ ವಾಹನದ ಮೇಲಿರುವ ಫಲಕ ತೆರವುಗೊಳಿಸಿದ್ದಲ್ಲದೇ ಕರ್ನಾಟಕ ಸರಕಾರ ಎನ್ನುವ ಹೆಸರನ್ನು ಅಳಿಸಿ ಹಾಕಿ ೫೦೦ ರೂಪಾಯಿ ದಂಡದ ಚೀಟಿ ಕೊಟ್ಟಿದ್ದಾರೆ. ಪುರಸಭೆ ಕಾರಿನಲ್ಲಿ ಕರ್ನಾಟಕ ಸರಕಾರವೆಂದು ಹಾಕಿದರೇ ತಪ್ಪೇನು? ಪುರಸಭೆ ಸರಕಾರದ ವ್ಯಾಪ್ತಿಯೊಳಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ಎರಡು ವಾಹನಗಳಿರುವ ಕುಂದಾಪುರ, ದಾಂಡೇಲಿ, ಕುಮಟಾ ಮತ್ತಿರ ಕಡೆ ಅಧ್ಯಕ್ಷರು ಎಂದು ನಾಮಫಲಕ ಹಾಕಿರುವುದು ಗಮನಿಸಿದ್ದೇನೆ. ಯಾರೋ ದೂರು ಕೊಟ್ಟರೆಂದು ದಿಢೀರ್ ಬಂದು ಪುರಸಭೆಯ ವಾಹನದ ನಾಮಫಲ ತೆರವುಗೊಳಿಸುವ ಪೂರ್ವದಲ್ಲಿ ನಮ್ಮ ಬಳಿ ಚರ್ಚಿಸಬಹುದಿತ್ತು. ಆದರೆ ಸಾರಿಗೆ ಅಧಿಕಾರಿ ದಿಢೀರ್ ಆಗಿ ನಾಮಫಲಕ ತೆಗೆದು ಹಾಕಿದ್ದಾರೆ ಎಂದರು. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಗತ್ಯ ಬಿದ್ದರೆ ಕಾನೂನು ಹೋರಾಟ ಮಾಡಲೂ ಸಹ ಹಿಂಜರಿಯುವುದಿಲ್ಲ ಎಂದರು.

ಪುರಸಭೆಯ ಮುಖ್ಯಾಧಿಕಾರಿ ರಾಧಿಕಾ ಈ ಕುರಿತು ಪ್ರತಿಕ್ರಿಯಿಸಿ, ಮಂಗಳವಾರ ಸಂಜೆ ಸಾರಿಗೆ ಇಲಾಖೆಯಿಂದ ನೋಟೀಸು ಬಂದು ತಲುಪಿದೆ. ನಾವು ಈ ಕುರಿತು ಉತ್ತರ ನೀಡುವುದರೊಳಗಾಗಿ ನಾಮಫಲಕ ತೆರವುಗೊಳಿಸಲಾಗಿದೆ ಎಂದರು. ದೂರುದಾರ ಹಾಗೂ ಪುರಸಭೆಯ ಸದಸ್ಯ ಪಾಸ್ಕಲ ಗೋಮ್ಸ ಈ ಕುರಿತು ಪ್ರತಿಕ್ರಯಿಸಿ, ಪುರಸಭೆಯ ವಾಹನಕ್ಕೆ ಮುಖ್ಯಾಧಿಕಾರಿ ಪುರಸಭೆ, ಭಟ್ಕಳ ಎಂದು ಹಾಕುವ ಬದಲು ಅಧ್ಯಕ್ಷರು ಪುರಸಭೆ, ಭಟ್ಕಳ ಎಂದು ನಾಮಫಲಕ ಹಾಕಿರುವುದನ್ನು ಆಕ್ಷೇಪಿಸಿ ಸಾರಿಗೆ ಅಧಿಕಾರಿಗೆ ಲಿಖಿತ ದೂರು ನೀಡಿದ್ದು, ಅಧಿಕಾರಿಗಳು ತಾವು ಕೈಗೊಳ್ಳಬೇಕಾದ ಕ್ರಮ ಕೈಗೊಂಡಿದ್ದಾರೆ ಎಂದರು.

Advertisement

ಮಂಗಳವಾರ ಸಂಜೆಯಷ್ಟೇ ಸಾರಿಗೆ ಇಲಾಖೆಯಿಂದ ಪುರಸಭೆಗೆ ನೋಟೀಸು ತಲುಪಿತ್ತು. ನಾವು ಅವರ ನೋಟೀಸಿಗೆ ಉತ್ತರ ಕೊಡುವುದಕ್ಕೂ ಅವಕಾಶ ಕೊಡದೇ ನಾಮ ಫಲಕವನ್ನು ಸಾರಿಗೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
..ಎಸ್.ಎನ್.ರಾಧಿಕಾ, ಮುಖ್ಯಾಧಿಕಾರಿ, ಪುರಸಭೆ, ಭಟ್ಕಳ.

ಸರಕಾರದ ವಾಹನಗಳನ್ನು ಹೊರತು ಪಡಿಸಿ ಬೇರೆ ಯಾವುದೇ ವಾಹನಗಳಿಗೆ ಕರ್ನಾಟಕ ಸರಕಾರ ಎನ್ನುವ ನಾಮ ಫಲಕ ಹಾಕಲು ಅನುಮತಿ ಇಲ್ಲ. ಅಲ್ಲದೇ ನಂಬರ್ ಪ್ಲೇಟ್ ಹೊರತಾಗಿ ಬೇರೆ ಯಾವುದೇ ಬೋರ್ಡ ಹಾಕಲು ಕೂಡಾ ಅನುಮತಿ ಇಲ್ಲ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವೇ ಹಲವಾರು ಪ್ರಕರಣಗಳಲ್ಲಿ ಉಲ್ಲೇಖಿಸಿದೆ. ಅದ್ದರಿಂದ ಭಟ್ಕಳ ಪುರಸಭೆಯ ವಾಹನಕ್ಕೆ ಅಳವಡಿಸಿದ್ದ ಕರ್ನಾಟಕ ಸರಕಾರ ಹಾಗೂ ಅಧ್ಯಕ್ಷರು, ಪುರಸಭೆ, ಭಟ್ಕಳ ಎನ್ನುವ ಬೋರ್ಡನ್ನು ತೆರವುಗೊಳಿಸಲಾಗಿದೆ.
ಎಲ್. ಪಿ. ನಾಯ್ಕ, ಎ.ಆರ್.ಟಿ.ಓ. ಹೊನ್ನಾವರ.

Advertisement

Udayavani is now on Telegram. Click here to join our channel and stay updated with the latest news.

Next