Advertisement

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ಇಸ್ಲಾ-ವ-ತಂಝೀಮ್ ನಿರ್ಣಯ

03:10 PM Mar 22, 2023 | Team Udayavani |

ಭಟ್ಕಳ: ಇಲ್ಲಿನ ಮಜ್ಲಿಸೆ ಇಸ್ಲಾ-ವ-ತಂಝೀಮ್ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜಮಾತ್ ಪ್ರತಿನಿಧಿಗಳ ಸಭೆಯಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ನಿರ್ಣಯ ಕೈಗೊಂಡಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಲು ಬಯಸಿದ್ದ ತಂಝೀಮ್ ಅಧ್ಯಕ್ಷರಾಗಿರುವ ಇನಾಯತ್‍ವುಲ್ಲಾ ಶಾಬಂದ್ರಿಯವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

Advertisement

ಸಭೆಯಲ್ಲಿ ಭಟ್ಕಳ, ಶಿರಾಲಿ, ಮಂಕಿ, ಮುಡೇಶ್ವರ, ಹೊನ್ನಾವರ, ಉಪ್ಪೋಣಿ, ಸಂಶಿ ಮುಂತಾದೆಡೆಗಳ ಜಮಾತ್ ಪ್ರತಿನಿಧಿಗಳು ಭಾಗವಹಿಸಿದ್ದು ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎನ್ನುವ ಒಂದು ಪಂಗಡವಾದರೆ, ಬೇಡ ಎನ್ನುವ ಇನ್ನೊಂದು ಪಂಗಡ ಪ್ರಬಲವಾಗಿತ್ತು. ನಂತರ ಚರ್ಚೆಯನ್ನು ಮಾಡಿ ಮತದಾನಕ್ಕೆ ಹಾಕಿದಾಗ ಮುಸ್ಲಿಂ ಅಭ್ಯರ್ಥಿ ಬೇಕು ಎನ್ನುವುದಕ್ಕೆ ಅಲ್ಪ ಮತಗಳು ಬಂದಿದ್ದು ಬೇಡ ಎನ್ನುವುದಕ್ಕೆ ಹಚ್ಚಿನ ಮತಗಳು ಬಿದ್ದವು. ಇದರಿಂದ ಮುಂದಿನ ವಿಧಾನ ಸಭಾ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ತಂಜೀಂ ಬೆಂಬಲಿಸದಿರಲು ನಿರ್ಧರಿಸಿದೆ.

ಮಹಿಳೆಯರ ಪ್ರತಿಭಟನೆ
ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು ತಮ್ಮದೇ ಆದ ಅಭ್ಯರ್ಥಿಯೋರ್ವರನ್ನು ಗೆಲ್ಲಿಸಲು ಸಾಧ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ನಿರ್ಣಯಿಸಿದ್ದನ್ನು ಖಂಡಿಸಿ ಮುಸ್ಲಿಂ ಮಹಿಳೆಯರು ಬುಧವಾರ ಬೆಳಗ್ಗೆ ತಂಝೀಮ್ ಎದುರು ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮನವಿಯೊಂದನ್ನು ನೀಡಿದ ಅವರು ತಂಝೀಮ್ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದಿರಲು ನಿರ್ಧರಿಸಿದ್ದರಿಂದ ಭಾರೀ ಹಿನ್ನೆಡೆಯಾಗಿದೆ. ಯಾವುದೇ ಅಭ್ಯರ್ಥಿ ಇಲ್ಲಿಯ ತನಕ ನಮ್ಮ ಸಮುದಾಯಕ್ಕೆ ಸಹಾಯ ಮಾಡಿಲ್ಲ. ಕೋವಿಡ್ ಸಮಯದಲ್ಲಿ ತಮ್ಮ ಸಮುದಾಯ ಭಾರೀ ಸಂಕಷ್ಟ ಎದುರಿಸಿದರೂ ಸಹ ನಮಗೆ ಯಾರದ್ದೇ ಸಹಾಯ ದೊರೆತಿಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಸೋಲುವುದಾದರೂ ತೊಂದರೆ ಇಲ್ಲ, ನಾವು ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ನಾವು ನಮಗೆ ಸಂವಿಧಾನಾತ್ಮಕವಾಗಿ ನೀಡಿದ ಮತದಾನದ ಹಕ್ಕನ್ನು ನೋಟಾಕ್ಕೆ ಹಾಕುತ್ತೇವೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next