Advertisement

ಭಟ್ಕಳ: ಸಿಎಂ ಕಾರ್ಯಕ್ರಮಗಳು ರದ್ದು; ಜನತೆಗೆ ನಿರಾಸೆ

09:38 PM Jul 13, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಗೆ ಮುಖ್ಯ ಮಂತ್ರಿಗಳು ಆಗಮಿಸಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಸಮೀಕ್ಷೆ ಮಾಡಿ ಜಿಲ್ಲೆಯ ಜನತೆಗೆ ಸಾಂತ್ವನ ಹೇಳುವುದರೊಂದಿಗೆ ಅಧಿಕ ಪರಿಹಾರ ಘೋಷಣೆ ಮಾಡುತ್ತಾರೆಂದು ನಂಬಿದ್ದ ಜಿಲ್ಲೆಯ ಜನತೆಗೆ ನಿರಾಸೆಯನ್ನುಂಟು ಮಾಡಿದ್ದು ಉಡುಪಿ ಜಿಲ್ಲೆಯಿಂದಲೇ ವಾಪಾಸು ಹೋಗುವ ಮೂಲಕ ಜಿಲ್ಲೆಯನ್ನೇ ನಿರ್ಲಕ್ಷ ಮಾಡಿದಂತಾಗಿದೆ.

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಕೂಡಾ ಮಳೆಗಾಲದಲ್ಲಿ ಅಪಾರ ಹಾನಿ ಸಂಭವಿಸುತ್ತಲೇ ಇದ್ದರು ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರಕಾರ ಕ್ರಮ ಕೈಗೊಳ್ಳಲೇ ಇಲ್ಲ. ಮುಖ್ಯವಾಗಿ ಶರಾವತಿ ಹೊಳೆ ದಂಡೆಯ ಜನತೆ ಪ್ರತಿ ವರ್ಷವೂ ಕೂಡಾ ಡ್ಯಾಂ ಸೈಟಿನಿಂದ ನೀರು ಬಿಡುತ್ತಿದ್ದಂತೆಯೇ ಊರು ಬಿಡುವ ಪ್ರಸಂಗ ಎದುರಾಗುತ್ತಿದ್ದರು ಸಹ ಅವರಿಗೆ ಶಾಶ್ವತವಾದ ಪರಿಹಾರ ಒದಗಿಸುವಲ್ಲಿ ಮುತುವರ್ಜಿ ವಹಿಸಿಲ್ಲ. ಜಿಲ್ಲೆಯ ಬಹುತೇಕ ನದಿ, ಹಳ್ಳ-ಕೊಳ್ಳಗಳು ಹೂಳು ತುಂಬಿಕೊಂಡು ಇಲ್ಲವೇ ನದಿ ಪಾತ್ರದ ಅತಿಕ್ರಮಣದಿಂದಾಗಿ ನೀರು ಸರಾಗವಾಗಿ ಹರಿದು ಹೋಗದೇ ಅಕ್ಕ ಪಕ್ಕದ ಭತ್ತದ ಗದ್ದೆಗಳು, ರೈತರ ತೋಟಗಳಿಗೆ ನುಗ್ಗಿ ವಾರಗಟ್ಟೆ ನೀರು ನಿಂತೇ ಇರುವುದರಿಂದ ನಾಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗುವುದಲ್ಲದೇ, ತೋಟಗಳಲ್ಲಿ ತೆಂಗಿನಕಾಯಿ ಉದುರಲು ಆರಂಭವಾದರೆ, ಅಡಿಕಗೆ ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಕನಿಷ್ಟ ಹೊಳೆ ಹಳ್ಳಗಳನ್ನು ಆವರಿಸುವ ಗಿಡಗಳನ್ನು ಕಡಿದು ಅಲ್ಪ ಸ್ವಲ್ಪ ಹೂಳೆತ್ತುವ ಕಾರ್ಯ ಮಾಡಿದರೂ ಕೂಡಾ ಜಿಲ್ಲೆಯ ರೈತಾಪಿ ಜಮೀನುಗಳು ಜಲಾವೃತವಾಗುವುದು ತಪ್ಪುತ್ತದೆ.

ಮಳೆಗಾಲದ ಸಮಯದಲ್ಲಿ ಜಿಲ್ಲೆಯ ಅನೇಕ ಹಳ್ಳಿಗಳ ಸಂಪರ್ಕವೇ ಕಡಿತಗೊಳ್ಳುತ್ತವೆ. ಇನ್ನೂ ಕೂಡಾ ಕಾಲು ಸಂಕವನ್ನೇ ಅವಲಂಬಿರುವ ಅನೇಕ ಹಳ್ಳಿಗಳಿವೆ, ಮಳೆಗಾಲದಲ್ಲಿ ಅವುಗಳನ್ನು ಗುರುತಿಸಿ ಸರಕಾರ ಮುಂದಿನ ದಿನಗಳಲ್ಲಿಯಾದರೂ ಅಲ್ಲೊಂದು ಶಾಶ್ವತ ಸೇತುವೆ ನಿರ್ಮಾಣ ಮಾಡುವ ಬದಲು ಪ್ರತಿ ವರ್ಷವೂ ರಾಜಕಾರಣಿಗಳು ಹೋಗಿ ಅವರ ಸಂಕಷ್ಟವನ್ನು ಕಂಡು ವಾಪಾಸು ಬರುವುದೇ ಪರಿಪಾಠವಾಗಿ ಬಿಟ್ಟಿದೆ.
ಜಿಲ್ಲೆಯ ಕುರಿತು ಈ ಹಿಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಯಡ್ಯೂರಪ್ಪ ಅಪಾರ ಪ್ರೀತಿಯನ್ನು ಹೊಂದಿದ್ದು ಆಗಾಗ ಜಿಲ್ಲೆಗೆ ಬಂದು ಜನರ ಸಂಕಷ್ಟವನ್ನು ಆಲಿಸುತ್ತಿದ್ದರಲ್ಲದೇ ಜಿಲ್ಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲೂ ಕೂಡಾ ಮುಂದಾಗಿದ್ದರು. ಆದರೆ ಅಂದಿನ ಸೀಮಿತ ಬಜೆಟ್‌ನೊಂದಿಗೆ ಜಿಲ್ಲೆಗೆ ನೀಡಿದ ನೆರವು ಬೌಗೋಳಿಕವಾಗಿ ದೊಡ್ಡ ಕ್ಷೇತ್ರವನ್ನು ಹೊಂದಿದ್ದ ಜಿಲ್ಲೆಯ ಅಭಿವೃದ್ಧಿಗೆ ವೇಗ ಕೊಡುವಲ್ಲಿ ಸಾಧ್ಯವಾಗಿಲ್ಲ. ಮುಖ್ಯ ಮಂತ್ರಿಗಳಾದ ಹೊಸದರಲ್ಲಿ ಜಿಲ್ಲೆಗೆ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರು ಕೇವಲ ಯಲ್ಲಾಪುರ ಅಂಕೋಲಾಕ್ಕೆ ಬಂದು ಹೋಗಿದ್ದು ಬಿಟ್ಟರೆ ಜಿಲ್ಲೆಯ ಇತರೇ ಯಾವುದೇ ತಾಲೂಕನ್ನು ಸಂದರ್ಶಿಸುವ ಜನತೆಯ ಸಂಕಷ್ಟ ಅರಿಯುವ ಕಾಳಜಿ ವಹಿಸಲೇ ಇಲ್ಲ. ಜಿಲ್ಲೆಯಲ್ಲಿ ೫ ಶಾಸಕರನ್ನು ಹೊಂದಿದ್ದ ಪಕ್ಷ ಜಿಲ್ಲೆಯನ್ನೇ ನಿರ್ಲಕ್ಷಿಸಿದೆಯೇ ಎನ್ನುವ ಮಾತು ಜನರಿಂದ ಕೇಳಿಬರುತ್ತಿದೆ.

ಮೊಗೇರ ಸಮಾಜದ 114 ದಿನದ ಹೋರಾಟ

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸುವಂತೆ ಆಗ್ರಹಿಸಿ ಮೊಗೇರ ಸಮಾಜದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 114 ನೇ ದಿನಕ್ಕೆ ಕಾಲಿಟ್ಟಿದ್ದು ಬುಧವಾರ ಮುಖ್ಯ ಮಂತ್ರಿಗಳು ಆಗಮಿಸುತ್ತಾರೆ ತಮ್ಮ ಅಹವಾಲನ್ನು ಕೇಳುತ್ತಾರೆ ಎನ್ನುವ ಭರವಸೆ ಕೂಡಾ ಮುಖ್ಯ ಮಂತ್ರಿಗಳ ಕಾರ್ಯಕ್ರಮ ರದ್ದಾಗುವ ಮೂಲಕ ಹುಸಿಯಾಗಿದೆ.

Advertisement

ತಾಲೂಕಾ ಆಡಳಿತ ಸೌಧದ ಎದುರು 114 ದಿನಗಳಿಂದ ಶಾಂತಿಯುತವಾಗಿ ಕಳೆದ ಮಾರ್ಚ 23 ರಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಮೊಗೇರ ಸಮಾಜದ ಪ್ರಮುಖರು ಈಗಾಗಲೇ ಅನೇಕ ಬಾರಿ ಸಂಬಂಧಪಟ್ಟ ಮಂತ್ರಿಗಳಲ್ಲಿ, ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಉನ್ನತ ಮಟ್ಟದ ಸಭೆಯನ್ನು ನಡೆಸಿದರೂ ಸಹ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಇರುವಾಗ ಮುಖ್ಯ ಮಂತ್ರಿಗಳು ಸಮಿತಿಯನ್ನು ರಚಿಸಿದ್ದು ಸಮಿತಿಯ ಅವಧಿಯನ್ನು ಕಡಿಮೆಗೊಳಿಸಿ ಎಂದು ಮೊಗೇರ ಸಮಾಜದ ವತಿಯಿಂದ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಿರುವಾಗ ಭಟ್ಕಳಕ್ಕೆ ಮುಖ್ಯ ಮಂತ್ರಿಗಳು ಬಂದಾಗ ಅವರನ್ನೇ ಖುದ್ದು ಕಂಡು ತಮ್ಮ ಅಹವಾಲನ್ನು ಸಲ್ಲಿಸಬೇಕು ಎನ್ನುವ ಆಲೋಚನೆಯಲ್ಲಿರುವ ಮೊಗೇರ ಸಮಾಜ ಮುಖ್ಯ ಮಂತ್ರಿಗಳ ಕಾರ್ಯಕ್ರಮವೇ ರದ್ದಾಯಿತು ಎನ್ನುವಾಗ ಮತ್ತೊಮ್ಮೆ ಚಿಂತಿಸುವಂತಾಗಿದೆ.

ಸರಕಾರ ಈಗಾಗಲೇ ಮೊಗೇರರ ಜಾತಿಪ್ರಮಾಣ ಪತ್ರದ ಗೊಂದಲಕ್ಕೆ ಸಂಬAಧಿಸಿದAತೆ ಉನ್ನತ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಮಿತಿ ರಚಿಸಿದ್ದು, ಈ ಸಮಿತಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿದೆ. ಸಮಿತಿ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮೊಗೇರ ಸಮಾಜ ನಂತರ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿತ್ತು. ತಮ್ಮ ಮನವಿಯನ್ನು ಸರಕಾರ ಪರಿಗಣಿಸುವ ಭರವಸೆ ಹೊಂದಿದ್ದರೂ ಸಹ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುವ ಅಸಮಾಧಾನ ಅವರದ್ದು.

ಧರಣಿಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರೂ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳೂ ಸಹ ಮೆರವಣಿಗೆ ನಡೆಸಿ ಎಸಿ, ಬಿಇಓ ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ನಡೆಸಿ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಮೊಗೇರ ಸಮಾಜದ ಪ್ರಮುಖರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯುವ ತನಕವೂ ತಮ್ಮ ಧರಣಿ ಮುಂದುವರಿಯುವುದು ಎಂದು ಹೇಳುತ್ತಿದ್ದು ಸರಕಾರದ ಸಮಿತಿಯು ವರದಿಯನ್ನು ನೀಡುವುದಕ್ಕೇ ಮೂರು ತಿಂಗಳು ಕಳೆದರೆ ಮತ್ತೆ ಸರಕಾರದಲ್ಲಿ ವರದಿ ಮಂಡನೆಯಾಗಿ ನಿರ್ಧಾರ ಮಾಡಲು ಇನ್ನೆಷ್ಟು ತಿಂಗಳು ಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕಳೆದ ೧೧೪ ದಿನಗಳಿಂದ ನಮ್ಮ ಧರಣಿ ಮುಂದುವರಿದಿದೆ. ರಾಜ್ಯ ಸರಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಮೇಷ ಎಣಿಸುತ್ತಿದೆ. ನಾವು ಹೊಸದಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಕೇಳುತ್ತಿಲ್ಲ, ಮುಂದುವರಿಸಲು ಕೇಳುತ್ತಿದ್ದೇವೆ. ಸಮಿತಿ ಒಂದು ತಿಂಗಳಲ್ಲಿ ವರದಿ ನೀಡುವಂತಾಗಬೇಕು. ಆದಷ್ಟು ಶೀಘ್ರ ನಮಗೆ ನ್ಯಾಯ ಕೊಡಬೇಕು. ಮುಖ್ಯ ಮಂತ್ರಿಗಳು ಬರುವ ಭರವಸೆಯೂ ಹುಸಿಯಾಗಿದೆ. ನಮ್ಮ ಹೋರಾಟವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.
ಎಫ್. ಕೆ. ಮೊಗೇರ ಹೋರಾಟ ಸಮಿತಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next